

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಸ್ರೀನ್ ತಾಜ್ ಮಹಿಳಾ ಪಿಎಸ್ಐ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಹೆಲ್ಮೆಟ್ ಇಲ್ಲದ ಬೈಕ್ ಸವಾರರನ್ನು ಅಡ್ಡಗಟ್ಟಿ ದಂಡ ವಸೂಲಿ ಪ್ರಾರಂಭಿಸಿದ್ದಾರೆ. ವಾಹನ ಚಾಲನೆಯ ನಿಯಮಾವಳಿಗಳನ್ನು ಮೀರಿ ಅಂದರೆ ಹೆಲ್ಮೆಟ್ ಇಲ್ಲದಿರುವುದು, ಟ್ರಿಪಲ್ ರೈಡಿಂಗ್, ಇನ್ಶುರೆನ್ಸ್ ಇಲ್ಲದಿರುವುದು, ಅತಿ ವೇಗದಂತಹ ನಿಯಮಬಾಹಿರ ಚಾಲನೆಗೆ ಕಡ್ಡಾಯವಾಗಿ ದಂಡ ವಿಧಿಸುತ್ತಾ ಮತ್ತೆ ಈ ತಪ್ಪು ಮಾಡದಿರುವಂತೆ ಪ್ರತಿ ಸವಾರನಿಗೂ ಎಚ್ಛರಿಸುತ್ತಿರುವುದು ಕಂಡು ಬಂದಿತು.

ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರವನ್ನೇ ಬೆಚ್ಚಿಬೀಳಿಸಿದ ಬೈಕ್ ಅಪಘಾತವೊಂದು ತಟಗಾರ್ ಕ್ರಾಸ್ ಬಳಿ ಸಂಭವಿಸಿ ಟ್ರಿಪಲ್ ರೈಡಿಂಗ್ ಬರುತ್ತಿದ್ದ ಯುವಕರಲ್ಲಿ ಇಬ್ಬರು ಸ್ಥಳದಲ್ಲೇ ಅಸುನೀಗಿ ಓರ್ವ ಆಸ್ಪತ್ರೆ ದಾರಿ ಹಿಡಿದ ಘಟನೆಯ ಬೆನ್ನಲ್ಲೇ ಪೊಲೀಸ್ ಇಲಾಖೆ ಮತ್ತಷ್ಟು ಕಟ್ಟುನಿಟ್ಟಾಗಿ ವಾಹನ ಚಾಲನೆಯ ನಿಯಮಾವಳಿಗಳನ್ನು ಮತ್ತು ಮುನ್ನೆಚ್ಛರಿಕಾ ಕ್ರಮಗಳನ್ನು ಗಮನಿಸಿ ನಿಯಮ ಮೀರಿದ ಚಾಲಕರಿಗೆ ದಂಡ ವಿಧಿಸಲು ಪ್ರಾರಂಭಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಟ್ಟಣದಾದ್ಯಂತ ಹದಿಹರೆಯದ ಯುವಕರು ನಿಯಮಬಾಹಿರವಾಗಿ ವೇಗಮಿತಿ ಇಲ್ಲದೇ ಬೈಕ್ ಚಲಾಯಿಸಿ ಅಪಾಯ ತಂದುಕೊಳ್ಳುತ್ತಿದ್ದಾರಲ್ಲದೇ ಇತರರಿಗೂ ಅಪಾಯ ತಂದೊಡ್ಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿರುವುದು ಕೊಂಚ ಕಷ್ಟವೇ ಆದರೂ ಅಪಾಯ ತಪ್ಪಿಸುವ ನಡೆ ಶ್ಲಾಘನೀಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Prathidvani Yellapura