
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಊರಿನ ಎಲ್ಲರ ಮನೆಯ ಹಿರಿಯ ಮಗ ಧರ್ಮಬೇದ ಮರೆತು ಬೆರೆತ ಆತ್ಮೀಯ ಅಜಾತಶತ್ರು ದಯಾಕಾರಂತ್ ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದುಗಳ ಚಿತಾಗಾರದಲ್ಲಿ ನಡೆದಿದ್ದು ಒಬ್ಬ ಒಳ್ಳೆಯ ಮನುಷ್ಯ ಪಂಚಭೂತಗಳಲ್ಲಿ ಲೀನವಾದರು.


ಎಲ್ಲರೊಂದಿಗೆ ಸದಾ ನಗುನಗುತ್ತಾ ತನ್ನೊಳಗಿನ ನೋವನ್ನು ಮರೆಯುತ್ತ ಕೊನೆಗು ವಿಧಿಯ ಕರೆಗೆ ಶರಣಾಗಿ ಯಲ್ಲಾಪುರ ತಾಲೂಕಿನ ಜನತೆಗೆ ಅಪಾರ ಪ್ರೀತಿ ಮತ್ತು ನೆನಪುಗಳನ್ನು ಬಿಟ್ಟು ಹೋದ ದಯಣ್ಣನ ಜೀವನವೆ ರೋಚಕ ಮತ್ತು ರೋಮಾಂಚಕ. ಅವರನ್ನು ಬಹಳ ಕಾಲದಿಂದ ಮತ್ತು ಬಲು ಹತ್ತಿರದಿಂದ ಕಂಡವರಿಗೆ ತಿಳಿದಿದೆ.

ಯಾರನ್ನು ನೋಯಿಸದೆ ಬೊಗಸೆ ತುಂಬಾ ಪ್ರೀತಿ ಹಂಚುವ ದಯಾಮಾಮ ಮಕ್ಕಳಿಗೆಲ್ಲಾ ಬಲು ಪ್ರಿಯರು.
ಕುಟುಂಬದೊಳಗೆ ಗಂಡ ಹೆಂಡತಿ ನಡುವೆ ಬಿನ್ನಾಭಿಪ್ರಾಯಗಳಿಗೆ ಜಗಳವಾಡಿದರೆ ತನಗೆ ಸಂಬಂಧವೇ ಇಲ್ಲದಿದ್ದರು ಬಗೆಹರಿಸಿ ಸಂಸಾರ ಸರಿಪಡಿಸಿ ಹೃದಯತುಂಬಿ ಹರಸುವ ದಯಣ್ಣ ಎಲ್ಲರ ಮನೆಮಗ.

ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಳುಗಳಿಗೆ ಹುರಿದುಂಬಿಸಿ ಗೆಲ್ಲುವ ಕೆಚ್ಚು ತುಂಬುವ ದಯಾ ಮಾಸ್ಟರ್ ಕ್ರೀಡಾಗುರುಗಳು.

ಇಷ್ಟೆಲ್ಲಾ ಒಳ್ಳೆತನವನ್ನು ಮೈಗೂಡಿಸಿಕೊಂಡು ಸರ್ವರೊಂದಿಗೆ ಸಮಾನತೆಯಲ್ಲಿ ಬದುಕಿ ಭೇದ ಭಾವ ಮರೆತು ಸಮಾಜಕ್ಕೆ ಭಾವೈಕ್ಯತೆ ಸಂದೇಶವನ್ನು ಪ್ರಚಾರ ಬಯಸದೆ ನೀಡುತ್ತಾ ಬಂದ ಒಬ್ಬ ಒಳ್ಳೆಯ ಹೃದಯವಂತ ಮನುಷ್ಯ ಎಂದರೆ ದಯಾಕಾರಂತ್ ಇನ್ನಿಲ್ಲಬೆಂಬ ಪದ ಅರಗಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ.

ಗ್ರಾಮದೇವಿ ಜಾತ್ರೆಯಲ್ಲಿ, ಕೋಟೆಕರಿಯಮ್ಮ ವರ್ಧಂತಿ ಅನ್ನ ಸಂತರ್ಪಣೆಯಲ್ಲಿ, ತಿಲಕ್ ಚೌಕ್ ಗಜಾನನೋತ್ಸವ ಎಲ್ಲಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅನ್ನಪ್ರಸಾದ ಸೇವೆಯಲ್ಲಿ, ಚೌಡೇಶ್ವರಿ ದೇವಿ ಕಾರ್ಯಕ್ರಮಗಳಲ್ಲಿ ಅಲ್ಲಿಯೂ ಅನ್ನ ಸಂತರ್ಪಣೆಯಲ್ಲಿ, ಪೊಲೀಸ್ ವಸತಿಗೃಹ ಪ್ರಸನ್ನ ಗಣಪತಿ ವರ್ಧಂತಿ ಕಾರ್ಯದಲ್ಲಿ ಅಲ್ಲಿಯೂ ಅನ್ನಪ್ರಸಾದ ಸೇವೆಯಲ್ಲಿ, ಕಾಳಮ್ಮ ದೇವಾಲಯ ವರ್ಧಂತಿಯಲ್ಲಿ ಅನ್ನಪ್ರಸಾದ ಸೇವೆಯಲ್ಲಿ, ಎಲ್ಲಾ ಸನ್ನಿದಾನಗಳ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದ ಸೇವೆಯಲ್ಲಿ, ಹಿಂದೂ ಕಾರ್ಯಕ್ರಮಗಳ ಸೇವೆಯಲ್ಲಿ ಪ್ರಭು ಶ್ರೀರಾಮನ ಆರಾದನೆಯಲ್ಲಿ. ಎಲ್ಲಿ ನೋಡಿದರು ಅಲ್ಲಿ ಪ್ರಮುಖವಾಗಿ ಕಾಣಿಸುತ್ತಿದ್ದ ದಯಣ್ಣ ಇನ್ನು ನೆನಪು ಮಾತ್ರ ಅವರು ಬಿಟ್ಟು ಹೋದ ಧಾರ್ಮಿಕ ಸೇವಾ ಕಾರ್ಯಗಳ ಆದರ್ಶ ಕಿಂಚಿತ್ತಾದರು ನಮ್ಮ ಯುವ ಪೀಳಿಗೆಯಲ್ಲಿ ಬಂದರೆ ಅದೇ ದಯಣ್ಣನಿಗೆ ನಾವು ಕೊಡುವ ಆತ್ಮ ಸಂತೋಷ ಅದಕ್ಕೆ ಎಲ್ಲರು ಸಾದ್ಯವಾದಷ್ಟು ಪ್ರಯತ್ನಿಸೋಣ.


ನಾವು ನಮಗಾಗಾಗಿ,ನಮ್ಮವರಿಗಾಗಿ, ನಮ್ಮ ಊರಿಗಾಗಿ, ನಮ್ಮ ತಾಲೂಕಿಗಾಗಿ, ನಮ್ಮ ಜಿಲ್ಲೆಗಾಗಿ, ನಮ್ಮ ರಾಜ್ಯಕ್ಕಾಗಿ, ನಮ್ಮ ದೇಶಕ್ಕಾಗಿ, ನಮ್ಮ ಜಗತ್ತಿಗಾಗಿ, ಬದುಕುವ ಮದ್ಯೆ ದಯವಿಟ್ಟು ನಮ್ಮ ಧರ್ಮಕ್ಕಾಗಿ ಒಂದಷ್ಟು ಬದುಕಿ ದಯಾಕಾತರಂತೆ ಬದುಕಿ ಅದೇ ಈ ಭೂಮಿಯ ಋಣವ ತೀರಿಸುವ ಪರಿ ಅಲ್ಲವೆ.!! ಒಬ್ಬ ಒಳ್ಳೆಯ ಹೃದಯವಂತ ದಯಾಕಾರಂತ್ ಅವರ ಆತ್ಮಕ್ಕೆ ಪ್ರತಿಧ್ವನಿ ವೆಬ್ ನ್ಯೂಸ್ ಭಗವಂತನಲ್ಲಿ ಸದ್ಗತಿ ಕೋರುತ್ತದೆ. ರಾಮ್.ನಾಮ್ ಸತ್ಯ ಹೇ……ಶ್ಯಾಮಲಾ ನಾಗೇಶ್, ಪ್ರಧಾನ ಸಂಪಾದಕಿ, ಪ್ರತಿಧ್ವನಿ
Prathidvani Yellapura