

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದ ನಂತರದ ಮೊದಲ ಅಧಿವೇಶನ ಜು.3 ರಿಂದ ನಡೆಯಲಿದ್ದು ನೂತನ ಸಚಿವರು ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದರಾಗಬೇಕಿದ್ದು ಅದಕ್ಕಾಗಿ ಕನಿಷ್ಠ ಅಧ್ಯಯನ ಬೇಕಿದೆ ಇಲ್ಲವಾದಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಗದೆ ತಡವರಿಸಬೇಕಾಗುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯಾಗಿ ಭಟ್ಕಳ ಶಾಸಕ ಮಂಕಾಳ ವೈದ್ಯ ಆಯ್ಕೆಯಾದಾಗಿನಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರದಿರುವುದು ಆಶ್ಚರ್ಯವಾಗಿದೆ.

ಜು.3 ರಿಂದ ನಡೆಯಲಿರುವ ಅಧಿವೇಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳಿಗೆ ದ್ವನಿಯಾಗಬೇಕಿದೆ. ಆದರೆ ಸಚಿವರು ಇನ್ನೂ ಕ್ಷೇತ್ರಕ್ಕೆ ಕಾಲಿಡದಿದ್ದರೆ ಬೇಕಿರುವ ವ್ಯವಸ್ಥೆ ತಿಳಿಯುವುದಾದರು ಹೇಗೆ ? ತಿಳಿದುಕೊಳ್ಳದಿದ್ದಾಗ ಸದನ ಕಲಾಪದಲ್ಲಿ ನಮ್ಮ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಬೇಕಿರುವ ದುಡಿಯುವ ಕೈಗಳಿಗೆ ಕೆಲಸ ನೀಡಲು ಉದ್ಯಮ ಸ್ಥಾಪನೆ, ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಅನುಷ್ಟಾನಕ್ಕೆ ಪ್ರಯತ್ನ , ಅಪಘಾತಗಳ ಸರಮಾಲೆ ಕಾಣುತ್ತಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಏರಿಸುವ ಮತ್ತು ಅಪಘಾತಗಳಾದಾಗ ಚಿಕಿತ್ಸೆ ನೀಡಿ ಪ್ರಾಣ ಕಾಪಾಡುವ ಟ್ರಾಮಾ ಸೆಂಟರ್ ಸ್ಥಾಪನೆ, ಪ್ರವಾಸೋದ್ಯಮದಲ್ಲಿ ಹೆಚ್ಚಿನ ಅವಕಾಶಗಳಿದ್ದು ಅದರಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆ ಉನ್ನತೀಕರಣ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಬೆಳಕು ಚೆಲ್ಲಬಹುದಾಗಿದೆ.

ಈ ಎಲ್ಲಾ ಅಭಿವೃದ್ಧಿ ಕನಸುಗಳು ಮಾಜಿ ಸಚಿವ ಹಾಲಿ ಶಾಸಕ ಹೆಬ್ಬಾರ್ ಅವರದಾಗಿತ್ತು. ಅದಕ್ಕಾಗಿ ನಿರಂತರ ಪ್ರಯತ್ನವು ಸಾಗಿತ್ತು. ಸದ್ಯ ಸರ್ಕಾರ ಕಾಂಗ್ರೆಸ್‌ನದ್ದಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಮಂಕಾಳ ವೈದ್ಯರಾಗಿರುವುದರಿಂದ ವಿರೋಧ ಪಕ್ಷದ ಶಾಸಕರಾಗಿರುವ ಹೆಬ್ಬಾರ್ ಅವರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಬಲ ತುಂಬಬೇಕಿದೆ. ಇದಕ್ಕೆ ಸದನದಲ್ಲಿ ಸದ್ದು ನಿಮ್ಮದಾಗಬೇಕಿದೆ ಎಂಬುದು ಜನರ ಅಭಿಪ್ರಾಯವಾಗಿದೆ.



ಸದ್ಯ ಮುಂಗಾರು ತಡವಾಗಿ ಪ್ರಾರಂಭವಾಗಿದೆ ; ಇದಕ್ಕು ಮುನ್ನ ಬಿಸಿಲಿನ ಉಷ್ಣತೆಗೆ ಅಡಿಕೆ ತೋಟಗಳಲ್ಲಿ ಅನೇಕ ಮರಗಳು ಒಣಗಿ ನಿಂತವು, ಕೆಲವು ಹಿಂಗಾರದಲ್ಲಿ ಮಿಳ್ಳೆಗಳೆಲ್ಲ ಉದುರಿ ಬಾರಿ ನಷ್ಟವಾಗಿದೆ. ನೀರಿನ ಕೊರತೆಯಾಗಿ ಕೃಷಿ ಚಟುವಟಿಕೆ ತಡವಾಗಿ ಪ್ರಾರಂಭವಾಗುತ್ತಿದೆ, ಇದರಿಂದಾಗಿರುವ ಅಡ್ಡಪರಿಣಾಮಗಳಿಂದ ರೈತರು ದೃತಿಗೆಡದಂತೆ ಧೈರ್ಯ ತಬುವ ಕೆಲಸವಾಗಬೇಕಿದೆ ಇದಕ್ಕಾಗಿ ಉಸ್ತುವಾರಿ ಸಚಿವರ ಕ್ಷೇತ್ರ ಪ್ರವಾಸ ಅತ್ಯಂತ ಪ್ರಮುಖವಾಗಿದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.

ಭಟ್ಕಳ ಶಾಸಕ ಮಂಕಾಳ ವೈದ್ಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಭಾಗ್ಯ ಪಡೆದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ 26 ದಿನಗಳು ಕಳೆದರು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಾರದಿರುವುದು ಕುತೂಹಲ ಮೂಡಿಸಿದೆ. ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆ ಅದಾಗಲೆ ಯಲ್ಲಾಪುರ ಭೇಟಿ ನೀಡಿ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಂಡಗೋಡು, ಬನವಾಸಿ ಸೇರಿದಂತೆ ಯಲ್ಲಾಪುರ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗು ಪದಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ಮಾಡಿರುವುದು ಗಮನಾರ್ಹ ಸಂಗತಿ.

ಡಿ.ಎನ್.ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಯಲ್ಲಾಪುರ

Prathidvani Yellapura