
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಕಳೆದ ಕೆಲವರ್ಷಗಳ ಹಿಂದೆ ಯಲ್ಲಾಪುರ ಪಟ್ಟಣದ ಜನರ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲೆಂದೇ ಅನುಷ್ಠಾನಗೊಂಡ 25 ಕೋಟಿ ಮೌಲ್ಯದ ಬೇಡ್ತಿ ಕುಡಿಯುವ ನೀರಿನ ಯೋಜನೆ ಕಾಲಕ್ರಮೇಣ ನಿರ್ಲಕ್ಷಕ್ಕೊಳಗಾಗಿ ಅವಸಾನದತ್ತ ಸಾಗಿ ಕೇವಲ ಪಳಿಯುಳಿಕೆ ಉಳಿಯುವಂತಹ ಸ್ಥಿತಿಗೆ ಬಂದು ತಲುಪಿದೆ.

ಜನರಿಗಾಗಿ ಅನುಷ್ಠಾನಗೊಂಡ ಯೋಜನೆಯೊಂದು ಅಪಾರ ನಷ್ಟ ಕಂಡು ಜನೋಪಯೋಗಕ್ಕೆ ಬಾರದಂತಾಗಿದ್ದು ದುರಂತವಾದರೂ ಯೋಜನೆಗೆ ಬಳಸಿದ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳು, ಪರಿಕರಗಳನ್ನು ಉಳಿಸಿಕೊಳ್ಳುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿಫಲರಾಗಿರುವುದಕ್ಕೆ ಅಳಿದುಳಿದ ಅವಶೇಷಗಳು ಧಿಕ್ಕಾರ ಹೇಳುತ್ತಿವೆ.

ಯಲ್ಲಾಪುರ ಪಟ್ಟಣದಿಂದ ಶಿರಸಿಗೆ ಹೋಗುವ ಮಾರ್ಗಮದ್ಯೆ 12 ಕಿ.ಮೀ ವ್ಯಾಪ್ತಿಯಲ್ಲಿ ಬೇಡ್ತಿ ನದಿ ಹರಿಯುತ್ತಿದ್ದು ಮಳೆಗಾಲದಲ್ಲಿ ತುಂಬಿ ಹರಿದರೂ ಬೇಸಿಗೆಯಲ್ಲಿ ನೆಲ ಕಾಣುವಂತಾಗಿರುತ್ತದೆ.


ಆಗಿನ ಜನಪ್ರತಿನಿಧಿಗಳು, ನುರಿತ ತಜ್ಞರು, ಹಿರಿಯ ಅಧಿಕಾರಿಗಳು ಯೋಜನೆಯೊಂದನ್ನು ರೂಪಿಸಿ ಹರಿವ ನದಿಗೆ ಅಡ್ಡಲಾಗಿ 32 ಗೇಟುಗಳ ಬ್ಯಾರೇಜ್ ನಿರ್ಮಿಸಿದ್ದು ಮಳೆಗಾಲದಲ್ಲಿ ತುಂಬಿ ಹರಿವ ನೀರನ್ನು ಶೇಖರಿಸಿ , ಎರಡೆರಡು ಬಾರಿ ನೀರನ್ನು ಶೋಧಿಸಿ, ಶುದ್ಧೀಕರಿಸಲು ಘಟಕವೊಂದನ್ನು ನಿರ್ಮಿಸಿ 12 ಕಿ.ಮೀ ಕ್ರಮಿಸುವ ನೀರನ್ನು ತೂಕದಬೈಲು ಅರಣ್ಯ ಇಲಾಖೆಯ ನರ್ಸರಿ ಸಮೀಪ ಮತ್ತೊಂದು ಘಟಕ ನಿರ್ಮಿಸಿ ಪಟ್ಟಣದ ವೈ.ಟಿ.ಎಸ್.ಎಸ್ ಹಿಂಭಾಗದಲ್ಲಿ ನೀರು ಶೇಖರಿಸಿ ಪಟ್ಟಣದಾದ್ಯಂತ ನೀರು ಸರಬರಾಜಾಗುತ್ತಿತ್ತು.
ಆದರೆ ಕೆಲ ಸಮಯ ಸರಬರಾಜಾದ ನೀರು ನಂತರ ಹುಬ್ಬಳ್ಳಿಯಿಂದ ಹರಿದು ಬರುವ ಹೊಲಸೆಲ್ಲಾ ನದಿ ನೀರಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ಪುಕಾರು ಪಟ್ಟಣದಲ್ಲಿ ವ್ಯಾಪಕವಾಗಿ ಹರಡಿ ಜನರು ಬೇಡ್ತಿ ನೀರನ್ನು ಬಳಸುವುದನ್ನೇ ಬಿಟ್ಟರು. ಇದನ್ನೇ ನೆಪವಾಗಿರಿಸಿಕೊಂಡ ಸಂಬಂಧಿಸಿದ ಇಲಾಖಾ ಸಿಬ್ಬಂದಿಗಳೂ ಸಹ ಬೇಡ್ತಿ ಯೋಜನೆಯನ್ನು ನಿರ್ಲಕ್ಷಿಸುತ್ತಾ ಬಂದ ಫಲವೇ ಯೋಜನೆಗೆ ತುಕ್ಕು ಹಿಡಿಯಲು ಕಾರಣವಾಯಿತು.


ಸದ್ಯ ಶಾಸಕ ಶಿವರಾಮ ಹೆಬ್ಬಾರ ಪ್ರಯತ್ನದ ಫಲವಾಗಿ 100 ಕೋಟಿಗೂ ಅಧಿಕ ಮೊತ್ತದಲ್ಲಿ ಬೊಮ್ಮನಳ್ಳಿ ರಿವರ್ ಪ್ರಾಜೆಕ್ಟ್ ಅಡಿ ಪಟ್ಟಣಕ್ಕೆ ನೀರು ತರುವ ಬೃಹತ್ ಯೋಜನೆಯ ಅನುಷ್ಠಾನ ನಿಧಾನಗತಿಯಲ್ಲಿ ಸಾಗುತ್ತಿದ್ದು ಸಂಬಂಧಿಸಿದ ಇಲಾಖೆ ಇದನ್ನಾದರೂ ಸರಿಯಾಗಿ ನಿರ್ವಹಣೆ ಮಾಡಿ ಉಳಿಸಿಕೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.






ಪಾಳುಬಿದ್ದ ಬೇಡ್ತಿ ಯೋಜನೆಯ ಕಟ್ಟಡ , ಬ್ಯಾರೇಜ್, ಹಾಗೇಯೇ ಹಾಳಾಗುವ ಬದಲು ಬೇಡ್ತಿ ನದಿ ತಟವನ್ನು ಉತ್ತಮ ಪ್ರವಾಸೀ ತಾಣವನ್ನಾಗಿಸಬಹುದಾಗಿದೆ. ನೀರಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್ 32 ಗೇಟುಗಳನ್ನು ಹೊಂದಿದ್ದು ನೋಡಲು ಕೆ.ಆರ್.ಎಸ್ ಮಾದರಿಯಲ್ಲೇ ಗೋಚರಿಸುತ್ತದೆ. ಬೇಡ್ತಿ ಸೇತುವೆಯೂ ಆಕರ್ಷಕವಾಗಿದ್ದು ಕೆಲಕಾಲ ಪ್ರವಾಸಿಗರು ನಿಂತು ನದಿಯ ಸೌಂದರ್ಯವನ್ನು ಆಸ್ವಾದಿಸುವುದಲ್ಲದೇ ಫೋಟೋ ತೆಗೆದುಕೊಳ್ಳುತ್ತಿರುತ್ತಾರೆ. ಇಂತಹ ಸುಂದರ ಪರಿಸರದಲ್ಲಿ ಕೋಟ್ಯಾಂತರ ಹಣವನ್ನು ಯೋಜನೆಗೆ ಬಳಸಿ ವಿಫಲವಾದ ನಂತರ ಕನಿಷ್ಠ ಬಳಸಿದ ವಸ್ತುಗಳನ್ನಾದರೂ ಕಾಪಾಡಿಕೊಳ್ಳುವಲ್ಲಿ ಅಧಿಕಾರಿಗಳು ಮುಂದಾಗಬೇಕಿದೆ. ನುರಿತ ತಜ್ಞರೊಂದಿಗೆ ಸಮಾಲೋಚಿಸಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ಸ್ಥಳವನ್ನು ಪ್ರವಾಸೀ ತಾಣವನ್ನಾಗಿಸಬಹುದಾಗಿದೆ.
ಉತ್ತರಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಹೊಂದಿರುವ ಜಿಲ್ಲೆಯಾಗಿದೆ. ಒಂದೆಡೆ ಕಡಲು ಮತ್ತೊಂದೆಡೆ ಜಲಪಾತ, ಹಸಿರ ಸ್ವರ್ಗ, ಧಾರ್ಮಿಕ ಪ್ರವಾಸೋದ್ಯಮ ಇನ್ನೂ ಅನೇಕ ವಿಶೇಷತೆಗಳನ್ನು ತನ್ನೊಳಗೆ ಉಳಿಸಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಈ ಸಾಲಿಗೆ ಯಲ್ಲಾಪುರದ ಬೇಡ್ತಿ ಸೇತುವೆಯ ಸಮೀಪದ ಬೇಡ್ತಿ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸಿದ ಬ್ಯಾರೇಜ್, ಶುದ್ದೀಕರಣ ಘಟಕದ ಪರಿಸರ ಸುಂದರ ತಾಣವನ್ನಾಗಿಸಬಹುದಾಗಿದೆ. ಇದರಿಂದ ನಷ್ಟಕ್ಕೊಳಗಾದ ಯೋಜನೆಯೊಂದರ ಪಳಿಯುಳಿಕೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿದೆ ಎಂಬ ಸಮಾಧಾನ ತರಲಿದೆ. – ವಿ.ಜಿ ಗಾಂವ್ಕರ್, ಪತ್ರಕರ್ತ
ಪರಿಸರಕ್ಕೆ ಧಕ್ಕೆಯಾಗದಂತೆ ನದಿ ಪಾತ್ರಕ್ಕೂ ತೊಂದರೆಯಾಗದಂತೆ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳಲು ಪ್ರವಾಸೋದ್ಯಮ , ಅರಣ್ಯ ಇಲಾಖೆಗಳು ಜಂಟಿಯಾಗಿ ತಜ್ಞರ ಸಮಿತಿಯನ್ನೊಳಗೊಂಡಂತೆ ಪರಿಶೀಲಿಸಿ ಪ್ರವಾಸೀ ತಾಣವನ್ನಾಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ನಿಜಕ್ಕೂ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ಸುಂದರ ಬೇಡ್ತಿ ಸೇತುವೆ, ಬ್ರಿಟಿಷ್ ಕಾಲದ ಹಳೆಯ ಸೇತುವೆ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್, ಒಣಗಿ ನಿಂತ ಮರಗಳು ನೋಡುಗರನ್ನು ಕೆಲಕಾಲ ತನ್ಮಯಗೊಳಿಸುತ್ತದೆ. – ಅಭಿನವ ಗಿರಿರಾಜ್, ಹವ್ಯಾಸೀ ಛಾಯಗ್ರಾಹಕ




Prathidvani Yellapura