
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ : ಸಾವಿರಾರು ವರ್ಷಗಳ ಹಿಂದಿನ ಪವಿತ್ರ ರಾಮಜನ್ಮ ಭೂಮಿಯಲ್ಲಿ ಕೆಲವೇ ತಿಂಗಳುಗಳಲ್ಲಿ ಭವ್ಯ ಮಂದಿರ ಪ್ರತಿಷ್ಠಾಪನೆಗೊಳ್ಳಲಿದೆ. ಆ ಹಿನ್ನಲೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಅಯೋಧ್ಯೆಯ ರಾಮ ಮಂದಿರ ಪ್ರದೇಶದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ವೇದಗಳ ಪಾರಾಯಣ, ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಉತ್ತರಕನ್ನಡ ಮತ್ತು ಶಿವಮೊಗ್ಗಾದ ಮತ್ತೂರಿನ ವೇದ ವಿದ್ವಾಂಸರು, ಪಂಡಿತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ ಎಂದು ಈ ಪ್ರದೇಶದ 4೦ ವಿದ್ವಾಂಸರ ತಂಡದ ಮುಖ್ಯಸ್ಥ ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.

ಅವರು ಪಟ್ಟಣದ ಎಲ್.ಎಸ್.ಎಂ.ಪಿ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡುತ್ತಿದ್ದರು.

ಪ್ರಧಾನವಾಗಿ ವಿಶ್ವಹಿಂದೂ ಪರಿಷತ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಸುಮಾರು 3೦ ಲಕ್ಷ ವೆಚ್ಚ ತಗುಲಲಿದೆಯಾದರೂ ನಾವೆಲ್ಲರೂ ಸೇವಾರ್ಥಿಗಳಾಗಿ ಭಾಗವಹಿಸಲಿದ್ದೇವೆ. ಜುಲೈ.21 ರಿಂದ 28 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಶುಕ್ಲ ಯಜುರ್ವೇದ ಸಂಹಿತ ಪಾರಾಯಣ ಹವನ ಹಾಗೂ ಶ್ರೀಮದ್ ಭಾಗವತ ಸಪ್ತಾಹ, ವಾಲ್ಮಿಕಿ ರಾಮಾಯಣ, ಆಧ್ಯಾತ್ಮ ರಾಮಾಯಣ, ವಿಷ್ಣು ಸಹಸ್ರನಾಮ ಇವುಗಳನ್ನು ಏಳು ದಿನಗಳ ಕಾಲ ನಡೆಸುವುದಕ್ಕೆ ಈ ತಾಲೂಕಿನ ಈ ಜಿಲ್ಲೆಯ ವಿದ್ವಾಂಸರಿಗೆ ಅವಕಾಶ ಸಿಕ್ಕಿದ್ದು ಸುದೈವ ಎಂದರು.

ರಾಮಾಯಣದ 24 ಸಾವಿರ ಶ್ಲೋಕ, ಭಾಗವತದ 18 ಸಾವಿರ ಶ್ಲೋಕ, ಋಗ್ವೇದದ 10 ಸಾವಿರ, ಯಜುರ್ವೇದದ 3 ಸಾವಿರ, ಶುಕ್ಲ ಯಜುರ್ವೇದದ 3 ಸಾವಿರ ಮಂತ್ರ ಹೀಗೆ 5 ಸಲ ಪಾರಾಯಣ ಮಂತ್ರೋಕ್ತ ಹವನ ನಡೆಯಲಿದೆ.

ದೇಶದಲ್ಲೇ ತೀರಾ ವಿರಳವಿರುವ ನಮ್ಮ ಕವಲಕ್ಕಿಯ ಸಾಮವೇದ ಪಂಡಿತರಾದ ಗಜಾನನ ಭಟ್ಟ, ವಿನಾಯಕ ಭಟ್ಟ ಇವರು ಋಗ್ವೇದಕ್ಕೆ ಗುರುಪಾದ ಭಟ್ಟ, ಯಜುರ್ವೇದಕ್ಕೆ ಮತ್ತೂರಿನ ಘನಪಾಟಿ ಚನ್ನಕೇಶವ ಅವಧಾನಿ , ಶ್ರೀಮಠದ ಪುರೋಹಿತರಾದ ಚಿನ್ಮಯಿ ಜೋಷಿ, ಶುಕ್ಲ ಯಜುರ್ವೇದಕ್ಕೆ ಗಿರೀಶ ಭಟ್ಟ, ವಿದ್ವಾನ ವೆಂಕಟರಮಣ ಭಟ್ಟ ಸುಳಗಾರ ರಾಮಾಯಣ, ಗಣಪತಿ ಭಟ್ಟ ಕವಲಕ್ಕಿ ಭಾಗವತಕ್ಕೆ ನೇತ್ರತ್ವ ವಹಿಸುವರು. ಒಟ್ಟಾರೆಯಾಗಿ 4೦ ವೇದ-ಸಂಸ್ಕೃತ ವಿದ್ವಾಂಸರು ಭಾಗವಹಿಸುವರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎಲ್.ಎಸ್.ಎಂ.ಪಿ ಯ ಉಪಾಧ್ಯಕ್ಷ ಟಿ.ಆರ್.ಹೆಗಡೆ ತೊಂಡೇಕೆರೆ ಮತ್ತು ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ ಪ್ರಶಾಂತ ಹೆಗಡೆ ಉಪಸ್ಥಿತರಿದ್ದರು.


Prathidvani Yellapura