Breaking News

ಪವರ್ ಟವರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿ ; ಕರೆಂಟಿಲ್ಲದೇ ಬಸವಳಿದ ಜನತೆ : ಸ್ವಲ್ಪ ಸಹಿಸಿಕೊಂಡರೆ ವಿದ್ಯುತ್ ಸಮಸ್ಯೆಗೆ ಪರಿಹಾರ..


ಯಲ್ಲಾಪುರ : ಕಳೆದ ಕೆಲದಿನಗಳಿಂದ ಯಲ್ಲಾಪುರ ತಾಲೂಕಿನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ಯಾಡುತ್ತಿದ್ದು ಬೇಸಿಗೆಯ ಧಗೆಯಲ್ಲಿ ಬಸವಳಿದ ಜನತೆ ಹಿಡಿಶಾಪ ಹಾಕುತ್ತಿದ್ದರೆ ಕರೆಂಟನ್ನೆ ನಂಬಿ ವ್ಯಾಪಾರ ಮಾಡುವ ಐಸ್‌ಕ್ರೀಂ ವ್ಯಾಪಾರಿಗಳು ನಷ್ಟ ಅನುಭವಿಸುತ್ತಾ ಐಸ್‌ಕ್ರೀಂ ಮಾರುವುದನ್ನೇ ಬಿಡುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಇದಕ್ಕೆ ನಿರ್ವಹಣೆ ಹೆಸರಿನಲ್ಲಿ ದಿನವಿಡೀ 8 ಘಂಟೆಗಳ ಕಾಲ ನಿರಂತರ ವಿದ್ಯುತ್ ಕಡಿತವಾಗುತ್ತಿರುವುದೇ ಕಾರಣವಾಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ ಆದರೆ ವಾಸ್ತವದಲ್ಲಿ ಕರೆಂಟ್ ತೆಗೆಯುತ್ತಿರುವುದೆ ಭವಿಷ್ಯದಲ್ಲಿ ವಿದ್ಯುತ್ ಸಮಸ್ಯೆ ಬರದಂತೆ ಪವರ್ ಟವರ್ ಅಳವಡಿಸುತ್ತಿರುವುದಕ್ಕಾಗಿ ಎಂಬುದು ಅನೇಕರಿಗೆ ತಿಳಿದಿಲ್ಲವಾಗಿದೆ.


ಒಂದು ಮೂಲದ ಪ್ರಕಾರ 33ಕಿ.ವೋ ವಿದ್ಯುತ್ ಲೈನಿನ ನಿರ್ವಹಣೆ ಭರದಿಂದ ಸಾಗುತ್ತಿದೆ. ಯಲ್ಲಾಪುರ ಪಟ್ಟಣಕ್ಕೆ ಕಿರವತ್ತಿ ಹೊಸಳ್ಳಿಯಿಂದ 18 ಕ್ಕೂ ಅಧಿಕ ಕಿಲೋಮೀಟರುಗಳ ಮೈನ್‌ಲೈನ್ ಮೂಲಕ ದಟ್ಟಾರಣ್ಯದಲ್ಲಿ ಸಿಮೆಂಟ್ ಕಂಬಗಳಲ್ಲಿ 33 ಕಿ.ವೋ ಲೈನ್ ಮೂಲಕ ವಿದ್ಯುತ್ ಹರಿದು ಬರುತ್ತಿದೆ. ವಿದ್ಯುತ್ ಮುಖ್ಯ ಮಾರ್ಗದ ಆಸುಪಾಸಿನಲ್ಲಿ ಬೆಳೆದು ನಿಂತ ಬೃಹತ್ ಗಾತ್ರದ ಮರದ ರೆಂಬೆಕೊಂಬೆಗಳನ್ನು ಕಟಾವು ಮಾಡಿ ಮಳೆಗಾಲದಲ್ಲಿ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿತ್ತು. ಕಾಲ ಬದಲಾದಂತೆ ವಿದ್ಯುತ್ ಸಂಪರ್ಕದಲ್ಲಿ ಉನ್ನತೀಕರಣವಾಗುತ್ತಾ ಸಿಮೆಂಟ್ ಕಂಬಗಳ ವ್ಯವಸ್ಥೆಗೆ ನಿಧಾನವಾಗಿ ಇತಿಶ್ರೀ ಹಾಡುತ್ತಾ ಬೃಹತ್ ಗಾತ್ರದ ಕಬ್ಬಿಣದ ಪವರ್ ಟವರುಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ಬೃಹತ್ ಗಾತ್ರದ ಮರಗಳು ಮುರಿದು ಬೀಳುವುದು, ಕಂಬಗಳು ತುಂಡಾಗುವುದು ತಪ್ಪಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಮಳೆಗಾಲದಲ್ಲೂ ಸಹ ನಿರಂತರ ಅನಿಯಮಿತ ವಿದ್ಯುತ್ ಹರಿದು ಬರಲು ಅನುಕೂಲವಾಗಲಿದೆ. ಈ ಕಾರಣದಿಂದ ಈ ಪ್ರಮಾಣದ ಕರೆಂಟ್ ತೆಗೆಯಲಾಗುತ್ತಿದೆ ಎಂಬುದು ಹೆಸ್ಕಾಂ ಮೂಲದ ಮಾಹಿತಿಯಾಗಿದೆ.


ಹೊಸಳ್ಳಿಯಿಂದ ಯಲ್ಲಾಪುರದವರೆಗೆ ಎಂ+3 ಮತ್ತು ಎಂ+6 ಮಾದರಿಯ ಒಟ್ಟು 227 ಪವರ್ ಟವರುಗಳು ಅಳವಡಿಸುತ್ತಿದ್ದು ಖಾಸಗಿ ಕಂಪನಿಯೊಂದು ಟೆಂಡರ್ ಪಡೆದಿದ್ದು ಅಳವಡಿಕೆ ಕಾರ್ಯ ಭರದಿಂದಲೇ ಸಾಗಿದೆ. ಮಳೆಗಾಲದ ಒಳಗೆ ಅಳವಡಿಕೆ ಕಾರ್ಯ ಮೂರ್ಣಗೊಳಿಸುವ ಗುರಿ ಹೊಂದಿದೆ. ಮಳೆ ಬಿತ್ತೆಂದರೆ ಅರಣ್ಯದೊಳಗೆ ವಾಹನಗಳು ಚಲಿಸಲಾಗದೇ ಯೋಜನೆ ಪೂರ್ಣಗೊಳಿಸಲಾಗದು. ಈ ಹಿನ್ನಲೆಯಲ್ಲಿ ಕರೆಂಟ್ ತೆಗೆಯುವ ಪ್ರಮಾಣ ಹೆಚ್ಚಾಗುತ್ತಿದೆ. 33 ಕಿವೋ ಲೈನ್ ಅಳವಡಿಕೆ ಕಾರ್ಯ ನಡೆಯುವಾಗ ಯಲ್ಲಾಪುರ ಹೆಸ್ಕಾಂ ಸಿಬ್ಬಂದಿ ಸ್ಥಳೀಯ ನಿರ್ವಹಣೆಯನ್ನು ಮಾಡುತ್ತಾ ಪವರ್ ಟವರ್ ಅಳವಡಿಸಲೂ ಸಹಕರಿಸುತ್ತಾ ಬರುತ್ತಿದ್ದಾರೆ. ಇದು ಬಹಳಷ್ಟು ಜನರಿಗೆ ತಿಳಿಯುತ್ತಿಲ್ಲ. ದಿನವಿಡೀ ಕರೆಂಟ್ ತೆಗೆಯುತ್ತಾರೆಂಬ ಕೋಪವನ್ನು ಹೆಸ್ಕಾಂ ಸಿಬ್ಬಂದಿಗಳ ಮೇಲೆ ಅಸಮಾಧಾನದ ಮೂಲಕ ತೋರಿಸುತ್ತಿದ್ದಾರೆ.


33ಕಿವೋ ಲೈನ್ ಸಿಮೆಂಟ್ ಕಂಬದಲ್ಲಿ ಕಿರವತ್ತಿ ಗ್ರಿಡ್‌ನಿಂದ ಯಲ್ಲಾಪುರಕ್ಕೆ ತರಲಾಗುತ್ತಿತ್ತು. ಮಳೆಗಾಲದಲ್ಲಿ ಮಳೆ ಗಾಳಿಗೆ ಮರಗಳ ರೆಂಬೆಕೊಂಬೆಗಳು ಬಿದ್ದು ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆ ಕೊನೆಗಾಣಿಸಲು ಬೃಹತ್ ಗಾತ್ರದ ಪವರ್ ಟವರುಗಳನ್ನು ಅಳವಡಿಸುತ್ತಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗುತ್ತಿದೆ. ಆದರೂ ಗುಳ್ಳಾಪುರ ಗ್ರಿಡ್, ಉಮ್ಮಚಗಿ ಗ್ರಿಡ್‌ಗಳಿಂದ ಪಟ್ಟಣಕ್ಕೆ ಪವರ್ ಕಡಿಮೆಯಿರುವ ವಿದ್ಯುತ್ ನೀಡುವ ಪ್ರಯತ್ನ ಸಾಗಿದೆ. ಭವಿಷ್ಯದ ಉತ್ತಮ ನಿರ್ವಹಣೆಗೆ ಅನಿಯಮಿತ ವಿದ್ಯುತ್ ಸರಬರಾಜಿಗೆ ಸಾರ್ವಜನಿಕರು ಸಹಕರಿಸಬೇಕಿದೆ. – ರಮಾಕಾಂತ ನಾಯ್ಕ, ಹೆಸ್ಕಾಂ,ಎಇಇ


ವಿದ್ಯುತ್ ನಂಬಿ ಐಸ್‌ಕ್ರೀಂ , ಹಾಲು ಹಾಗೂ ಇನ್ನಿತರ ವಸ್ತುಗಳ ವ್ಯಾಪಾರ ನಡೆಯುತ್ತಿದ್ದು ದಿನವಿಡೀ ಕರೆಂಟ್ ಇಲ್ಲವಾದರೆ ಅತಿ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ಹಾಗೆಂದು ಗುಣಮಟ್ಟದ ವಿದ್ಯುತ್ ನೀಡುವ ಪ್ರಯತ್ನದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಅರ್ಥವಾಗುತ್ತದೆ. ಬೆಳಿಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ವಿದ್ಯುತ್ ಕಡಿತ ಮಾಡುವ ಬದಲು ಅರ್ಧ ದಿನ ತೆಗೆದು ಕೆಲಸ ನಿರ್ವಹಿಸುವುದು ಮತ್ತೊಂದು ದಿನ ಅರ್ಧ ದಿನ ತೆಗೆದರೆ ಸಾಧ್ಯವಾದಷ್ಟು ಸಮಸ್ಯೆ ನಿಭಾಯಿಸಬಹುದಗಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಗಮನಹರಿಸಬೇಕಿದೆ. – ಐಸ್‌ಕ್ರೀಂ ವ್ಯಾಪಾರಸ್ಥರು, ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *