
ಪ್ರತಿಧ್ವನಿ,ಯಲ್ಲಾಪುರ : ಸೇವೆ ಮತ್ತು ಶಿಸ್ತು ಅಳವಡಿಸಿಕೊಳ್ಳಲು ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನದ ಮೌಲ್ಯಗಳನ್ನು ಹೆಚ್ಚಿಸಿಕೊಂಡು ಬದುಕು ಸಾರ್ಥಕವಾಗಿಸಿಕೊಳ್ಳಲು ಲಯನ್ಸ್ ಸೇವಾ ಸಂಸ್ಥೆ ಜಗತ್ತಿನಾದ್ಯಂತ ಹೆಸರಾಗಿದೆ. ನಮ್ಮಲ್ಲಿ ಅರ್ಜಿ ಸಲ್ಲಿಸಿ ಸದಸ್ಯರಾಗುವ ಪದ್ದತಿ ಇಲ್ಲ ನಾವೆ ಗೌರವಯುತವಾಗಿ ಕರೆದು ಸದಸ್ಯತ್ವ ನೀಡುವ ಪದ್ದತಿ ಇದೆ ಇಂತಹ ಶ್ರೇಷ್ಠ ಸಂಸ್ಥೆ ಯಲ್ಲಿ ದೀರ್ಘಕಾಲದಿಂದ ಸಾಗುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಪಿಎಮ್‌ಜೆಎಫ್ ಲಯನ್ ಗಣಪತಿ ಎನ್ ನಾಯಕ್ ಹೇಳಿದರು.

ಅವರು ಪಟ್ಟಣದ ಗಾಂಧಿವೃತ್ತದಲ್ಲಿರುವ ಶ್ರೀರಾಮ್ ರೆಸಿಡೆನ್ಸಿ ಪಾರ್ಟಿ ಹಾಲ್ ನಲ್ಲಿ ನಡೆದ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿ ನೂತನ ಅಧ್ಯಕ್ಷರಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಝೋನಲ್ ಚೇರ್ ಪರ್ಸನ್ ಆರ್.ಹೆಚ್. ನಾಯಕ್ ನೂತನವಾಗಿ ಸೇರ್ಪಡೆಯಾದ ಸದಸ್ಯರಿಗೆ ಪ್ರಮಾಣವಚನ ಭೋದಿಸಿ ಸಂಸ್ಥೆಗೆ ಬರಮಾಡಿಕೊಂಡರು.

ನೂತನ ಅಧ್ಯಕ್ಷ ಲಯನ್ ಸುರೇಶ್ ಬೋರ್ಕರ್ ಮಾತನಾಡಿ ಮನುಷ್ಯನ ಜೀವನ ಅತ್ಯಲ್ಪ ಸಮಯದ್ದಾಗಿದ್ದು ಭಗವಂತನ ಸೃಷ್ಟಿಯಲ್ಲಿ ಇರುವಷ್ಟು ದಿನ ಪರೋಪಕಾರಿಯಾಗಿ ಜನ ಸೇವೆ ಸಲ್ಲಿಸಬೇಕಿದೆ. ಇದರಲ್ಲೆ ಜೀವನದ ಸಾರ್ಥಕತೆ ಕಾಣಬಹುದಾಗಿದೆ. ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗ ಇಂತಹ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾದ್ಯವಾಗಿರಲಿಲ್ಲ ನಿವೃತ್ತಿ ನಂತರ ಅದನ್ನೆಲ್ಲಾ ಪೂರೈಸುತ್ತಿದ್ದೇನೆ. ನನ್ನ ಕೈಲಾದಷ್ಡು ಉತ್ತಮ ಸೇವಾ ಕಾರ್ಯದೊಂದಿಗೆ ಯಲ್ಲಾಪುರ ಲಯನ್ಸ್ ಕ್ಲಬ್ ಗೆ ಹೆಸರು ತರುವಲ್ಲಿ ಶ್ರಮಿಸಲಿದ್ದೇನೆ ಅದಕ್ಕಾಗಿ ಎಲ್ಲರ ಸಹಕಾರ ಕೋರುತ್ತೇನೆ ಎಂದರು.


ನೂತನ ಅಧ್ಯಕ್ಷ ಸುರೇಶ್ ಬೋರ್ಕರ್ ಅವರ ಶ್ರೀಮತಿ ಸುನಂದ ಪಾಟಣ್ಕರ್ ಸಹ ಲಯನ್ಸ್ ಕ್ಲಬ್ ಗೆ ಸೇರ್ಪಡೆಯಾಗುವ ಮೂಲಕ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ನ ಮೊದಲ ಮಹಿಳಾ ಸದಸ್ಯರು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನಿಕಟಪೂರ್ವ ಅಧ್ಯಕ್ಷ ಎಸ್.ಎನ್.ನಾಯ್ಕ್, ನೂತನ ಕಾರ್ಯದರ್ಶಿ ಎನ್.ಎ.ಭಟ್, ಖಜಾಂಚಿ ಶೇಷಗಿರಿ ಪ್ರಭು, ವೇದಿಕೆಯಲ್ಲಿ ಉಪಸ್ಥಿತರಿದ್ದರು.



ವಿವಿಧ ಸಂಘ ಸಂಸ್ಥೆಗಳ ಗಣ್ಯರು ನೂತನ ಪದಾಧಿಕಾರಿಗಳ ಹಿತೈಷಿಗಳು ಅಧ್ಯಕ್ಷರು ಪದಾಧಿಕಾರಿಗಳಿಗೆ ಅಭಿನಂದಿಸಿ ಗೌರವಿಸಿದರು.
ಲಯನ್ಸ್ ಬಳಗದ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರು ಸ್ನೇಹಿತರು ಪ್ರಮುಖರು ಉಪಸ್ಥಿತರಿದ್ದರು. ದ್ವಜ ವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಬಿಸಿದರು ವಿಶ್ವ ಶಾಂತಿಗಾಗಿ ಮೌನಾಚರಿಸಿ ಕೊನೆಯಲ್ಲಿ ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.


ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಿಮಿತ್ತ ಆಗಮಿಸಿದ ಎಲ್ಲರಿಗು ಔತಣಕೂಟ ಏರ್ಪಡಿಸಿದ್ದರು.

Prathidvani Yellapura