
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಯಲ್ಲಾಪುರ ತಾಲೂಕು ಜಲಪಾತಗಳ ತವರೆಂದು ಖ್ಯಾತಿ ಪಡೆದರೂ ಪಟ್ಟಣದಲ್ಲಿ ಮಾತ್ರ ಕೆರೆಗಳೇ ಪ್ರಮುಖ ಪಾತ್ರ ವಹಿಸಿವೆ.
ಪಟ್ಟಣ ವ್ಯಾಪ್ತಿಯಲ್ಲಿ ಪ್ರಮುಖವಾಗಿ 9 ಕೆರೆಗಳಿದ್ದು ಮಳೆಗಾಲದಲ್ಲಿ ತುಂಬಿ ನಳನಳಿಸುತ್ತಾ ಪಟ್ಟಣದಾದ್ಯಂತ ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖವಾಗಿವೆ. ಅವುಗಳಲ್ಲಿ 5 ಕೆರೆಗಳು ರಸ್ತೆ ಬದಿಯಲ್ಲೇ ಇದ್ದು ನೋಡುಗರ ಗಮನ ತನ್ನತ್ತ ಸೆಳೆಯುತ್ತವೆ. ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೂರು ಕೆರೆಗಳಿದ್ದು ಮುಂಡಗೋಡು ಸಾಗುವ ರಸ್ತೆ ಬದಿಯಲ್ಲಿ ಒಂದು ಕೆರೆ , ಕಾಳಮ್ಮನಗರ ದೇವಸ್ಥಾನದ ಮುಂಭಾಗದಲ್ಲಿ ಒಂದು ಕೆರೆ ಇದೆ.



ಹೋಲಿ ರೋಜರಿ ಚರ್ಚ್ ಮುಂಭಾಗದಲ್ಲಿರುವ ಮಾರುತಿ ಮಂದಿರದ ದೇವಕೆರೆ, ಅದರ ಪಕ್ಕದಲ್ಲೆ ಇರುವ ಮತ್ತೊಂದು ಕೆರೆ ಜೋಡುಕೆರೆಯಾಗಿ ಹೆಸರಾಗಿದ್ದು ಪ್ರವಾಸಿಗರನ್ನೂ ಸಹ ಕೆಲಕಾಲ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಂಜುನಾಥನಗರ ವಾರ್ಡ್ ಸದಸ್ಯ ಸತೀಶ ಶಿವಾನಂದ ನಾಯ್ಕರ ಪ್ರಯತ್ನ ಮತ್ತು ಶಾಸಕ ಶಿವರಾಮ ಹೆಬ್ಬಾರರ ಸಹಕಾರದೊಂದಿಗೆ ಜೋಡುಕೆರೆಯ ಅರ್ಧಭಾಗ ಫೇವರ್ಸ್ ಮತ್ತು ಫೆನ್ಸಿಂಗ್ ಅಳವಡಿಸಿದ್ದು ರಸ್ತೆ ಬದಿಯಲ್ಲಿ ಅಲಂಕಾರಿಕ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಸದ್ಯ ಹಿರಿಯರು, ಮಹಿಳೆಯರು ವಾಯು ವಿಹಾರಕ್ಕೆ ಈ ಸ್ಥಳವನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದು ಮತ್ತಷ್ಟು ವ್ಯವಸ್ಥೆ ಕಲ್ಪಿಸಿದಲ್ಲಿ ಪ್ರವಾಸೀ ತಾಣವಾಗಿ ಬದಲಾಗಲಿದೆ.

ಕೆರೆಯ ಸುತ್ತ ಕಲ್ಯಾಣಿ ನಿರ್ಮಿಸಿ ಕುಳಿತು ಕೊಳ್ಳುವ ಆಸನದ ವ್ಯವಸ್ಥೆ ಮಾಡಿ ಬಣ್ಣದ ಹೂಗಡಿಗಳನ್ನು ಬೆಳೆಸಿದರೆ ಕೆರೆಯ ಅಂದ ಹೆಚ್ಚುವುದಲ್ಲದೇ ಯಲ್ಲಾಪುರದ ಸೌಂದರ್ಯಕ್ಕೂ ಗರಿಮೂಡಿದಂತಾಗುತ್ತದೆ.



ಶಾರದಾಂಬಾ ದೇವಸ್ಥಾನದ ಮುಂಭಾಗದ ನಾಯ್ಕನಕೆರೆ, ಮುಂಡಗೋಡು ರಸ್ತೆಯ ಸಹಸ್ರಳ್ಳಿ ಕೆರೆ, ಕಾಳಮ್ಮನಗರದ ಕಾಳಮ್ಮ ಕೆರೆಗಳಿಗೂ ಕಾಯಕಲ್ಪ ಕಲ್ಪಿಸಿದರೆ ಮತ್ತಷ್ಟು ಮೆರುಗು ಬರುವುದಲ್ಲದೇ ನೀರಿನ ಶೇಖರಣೆಯೂ ಹೆಚ್ಚಾಗಿ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ. ಆಯಾ ವಾರ್ಡ್ ವ್ಯಾಪ್ತಿಯ ಸದಸ್ಯರ ಇಚ್ಛಾಶಕ್ತಿ, ಶಾಸಕರ ಅಭಯವಿದ್ದಲ್ಲಿ ಪಟ್ಟಣದ ಅಂತರ್ಜಲ ಜೀವನಾಡಿ ಕೆರೆಗಳು ನೋಡುಗರ ಕಣ್ಮನ ಸೆಳೆಯಲಿವೆ.




