
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ದಿನವೂ ದುಡಿದು ತಿನ್ನುವ ಲಾರಿ ಚಾಲಕ ಹಾಗೂ ಮಾಲಕರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವುದಕ್ಕಾಗಿ ಲಾರಿ ಚಾಲಕ ಹಾಗೂ ಮಾಲಕ ಸಂಘದವರು ಕರೆ ನೀಡಿದ್ದ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು ಯಲ್ಲಾಪುರ ತಾಲೂಕು ಘಟಕದವರು ಮುಷ್ಕರದಲ್ಲಿ ಪಾಲ್ಗೊಂಡು ಇತರರಿಗೆ ಜಾಗೃತಿ ಮೂಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಲಾರಿ ಚಾಲಕರು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿದ್ದು, ಮಂಗಳವಾರ ವಾಹನಗಳನ್ನು ರಸ್ತೆಗೆ ಇಳಿಸದೇ ಹೋರಾಟ ನಡೆಸಿದ್ದಾರೆ. ಹೋರಾಟದ ಬಿಸಿ ಸರ್ಕಾರಕ್ಕೆ ಮುಟ್ಟಿದ್ದು, ಸದ್ಯ ಮುಖ್ಯಮಂತ್ರಿ ನೇತ್ರತ್ವದಲ್ಲಿ ಲಾರಿ ಮಾಲಕರ ಸಂಘದ ಸಭೆ ನಡೆಯುತ್ತಿದೆ. ಸೂಕ್ತ ಭರವಸೆ ದೊರೆತರೆ ಮಾತ್ರ ಮುಷ್ಕರ ಹಿಂಪಡೆಯುವುದಾಗಿ ಲಾರಿ ಮಾಲಕ ಸಂಘದವರು ಹೇಳಿದ್ದಾರೆ. ಲಾರಿ ಮಾಲಕ ಚಾಲಕರ ಸಂಘದ ಹೋರಾಟಕ್ಕೆ ವಿವಿಧ ಸಂಘಟನೆಯವರು ಬೆಂಬಲವ್ಯಕ್ತಪಡಿಸಿದ್ದಾರೆ.

ಡಿಸೇಲ್ ದರ ಕಡಿಮೆ ಮಾಡಬೇಕು. ಟೋಲ್ ಪ್ಲಾಜಾಗಳನ್ನು ರದ್ದುಗೊಳಿಸಬೇಕು. ಗಡಿಭಾಗದಲ್ಲಿನ ಆರ್‌ಟಿಓ ಚೆಕ್‌ಪೊಸ್ಟ್ ರದ್ದು ಮಾಡಬೇಕು. ಎಫ್‌ಸಿ ಶುಲ್ಕ ಕಡಿಮೆಗೊಳಿಸಬೇಕು. ಸಾರಿಗೆ ವಾಹನಗಳ ನಗರ ಪ್ರವೇಶವನ್ನು ಮುಕ್ತಗೊಳಿಸಬೇಕು’ ಎಂದು ಆಗ್ರಹಿಸಿ ಲಾರಿ ಚಾಲಕ ಹಾಗೂ ಮಾಲಕ ಸಂಘದವರು ಪ್ರತಿಭಟನೆ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿಯೂ ಲಾರಿ ಚಾಲಕರು ಬೀದಿಗೆ ಇಳಿದು ಧರಣಿ ನಡೆಸಿದರು.
ಅದಾದ ನಂತರ ತಮ್ಮ ಬೇಡಿಕೆಗಳ ಬಗ್ಗೆ ಪೊಲೀಸ್ ಠಾಣೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿ-ಅಂಕೋಲಾ ರಸ್ತೆಯ ಕೆ ಮಿಲನ್ ಹೊಟೇಲ್ ಬಳಿ ಲಾರಿ ಮಾಲಕರು ಮುಷ್ಕರ ನಡೆಸಿದರು. ಟಿಎಂಎಸ್ ಪೆಟ್ರೋಲ್ ಬಂಕಿನ ಬಳಿ ಜನ ಜಾಗೃತಿಯ ಕರಪತ್ರಗಳನ್ನು ಹಂಚಿ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು.


ಸಂಘಟನೆ ತಾಲೂಕು ಅಧ್ಯಕ್ಷ ಸುಜಯ ಮರಾಠಾ ಮುಷ್ಕರದ ಮುಂದಾಳತ್ವವಹಿಸಿದ್ದು, ಗ್ರಾಮದೇವಿ ಟಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಮುಷ್ಕರಕ್ಕೆ ಬೆಂಬಲ ನೀಡಿದರು. ಟ್ಯಾಕ್ಸಿ ಚಾಲಕರ ಮಾಲಕರ ಕಾರ್ಯದರ್ಶಿ ಸಂದೀಪ್ ವಡ್ಡರ್, ಲಾರಿ ಮಾಲಕರ ಗೌರವ ಅಧ್ಯಕ್ಷ ಮಹೇಶ್ ನಾಯ್ಕ, ಪ್ರಮುಖರಾದ ಮುರಳಿ ರಾವಲ್, ಸಯ್ಯದ್ ಸಾಧಿಕ, ಸೈಯದ್ ಸಾಜಿದ, ಮುಜಿಮ್ ತೊಲಗಿ, ಅಜೀಮ್ ಖಾನ್, ಸಂಕೇತ್ ನಾಯಕ್, ಅಮಿತ್ ನಾಯ್ಕ, ನಾಗೇಂದ್ರ ಭಟ್, ದಾದಾಪೀರ್ ಹನುಮಸಾಗರ್, ನಯೀಮ್ ಶೇಕ್, ರಾಜೇಶ್ ನಾಯ್ಕ, ಹೈದರ್, ಮಹೇಶ್ ಬೋವಿ ಮುಷ್ಕರದಲ್ಲಿದ್ದರು.




