
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಬ್ರಾಹ್ಮಣರಾದವರು ಋಷಿಮುನಿಗಳ ಗೋತ್ರ ಪರಂಪರೆಯಿಂದ ಬಂದವರು. ನಮ್ಮ ಗುರಿ ಆಧ್ಯಾತ್ಮದತ್ತ ಮೋಕ್ಷದೆಡೆಗೆ ಇರಬೇಕಾದುದು ಮಹತ್ವದ್ದು. ಕೇವಲ ಪೌರೋಹಿತ್ಯಕ್ಕಾಗಿ, ಹಣ ಮಾಡುವುದಕ್ಕಾಗಿ ಸೀಮಿತಗೊಳ್ಳದೇ ನಮ್ಮ ಮೌಲ್ಯದ ಜೊತೆಯಲ್ಲಿ ನಾವು ಮುನ್ನಡೆಯಬೇಕು ಎಂದು ಜ್ಯೋತಿರ್ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.
ಅವರು ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಶಾರದಾಂಬಾ ಸಂಸ್ಕೃತ ವೇದ ಪಾಠಶಾಲೆ ಹಮ್ಮಿಕೊಂಡ 21 ದಿನದ ವಸಂತ ವೇದ ಸಂಸ್ಕೃತ ಯೋಗ ಶಿಬಿರ ಉದ್ಘಾಟಿಸಿ, ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬ್ರಾಹ್ಮಣನೇನೂ ಅರ್ಜಿ ಹಾಕಿ ಹುಟ್ಟಿಲ್ಲ. ನಮ್ಮ ಜಾತಿಯ ಬಗ್ಗೆ ನಮಗೆ ಅಭಿಮಾನವಿರಬೇಕು. ಇಂದು ಕೆಲವರು ಬ್ರಾಹ್ಮಣರನ್ನು ಟೀಕಿಸುವವರನ್ನು ಕಾಣುತ್ತೇವೆ. ಅಂತಹವರು ಅವರ ಕಷ್ಟಕಾಲದಲ್ಲಿ ಬ್ರಾಹ್ಮಣರ ಕಾಲಿಗೇ ಬೀಳುವುದನ್ನು ಕಂಡಿದ್ದೇವೆ. ಉ.ಕ, ದ.ಕ, ಶಿವಮೊಗ್ಗದ ಅನೇಕ ಪುರೋಹಿತರು ಬೆಂಗಳೂರಿನಂತ ಮಹಾನಗರಗಳಲ್ಲಿ ಉತ್ತಮ ಪುರೋಹಿತರಾಗಿ ಜೀವನ ನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂದು 10 ಎಕರೆ ಅಡಿಕೆ ತೋಟ ಇದ್ದವನಿಗಿಂತಲೂ ಶ್ರೇಷ್ಟ ಪುರೋಹಿತರನ್ನು ಹುಡುಕಿ ಹೆಣ್ಣುಮಕ್ಕಳನ್ನು ಕೊಡುವ ವಾತಾವರಣ ಬೆಳೆದುಬಂದಿದೆ. ಸಮಾಜದಲ್ಲಿ ನೆಮ್ಮದಿ, ಕುಟುಂಬದಲ್ಲಿ ಸುಖ ನೆಲೆಸಬೇಕಾದರೆ ಪುರೋಹಿತರೇ ಬೇಕಾಗುತ್ತಾರೆ. ಹಾಗಂತ ಬ್ರಾಹ್ಮಣರಾದ ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಆದರ್ಶಪ್ರಾಯರಾಗಿ ಇರುವ ವ್ತಕ್ತಿತ್ವ ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳ ಮೂಲಕ ಬ್ರಾಹ್ಮಣ ವಟುಗಳಿಗೆ ಉತ್ತಮ ಸಂಸ್ಕಾರ ದೊರೆಯುತ್ತದೆ. ಇದು ದೇವರು ನೀಡಿದ ಭಾಗ್ಯ ಎಂದು ಭಾವಿಸಬೇಕು ಎಂದರು.
ಋಷಿಕುಲ ಸಂಸ್ಥೆಯ ಮುಖ್ಯಸ್ಥ ಡಾ.ವಿಘ್ನೇಶ್ವರ ಭಟ್ಟ ಬಾಗಿನಕಟ್ಟಾ ಮಾತನಾಡಿ, ನಮ್ಮ ಸನಾತನ ಪರಂಪರೆಯಿಂದ ಬಂದ ಆಚರಣೆ, ಮೌಲ್ಯಗಳು ವೈಜ್ಞಾನಿಕತೆಯನ್ನು ಹೊಂದಿದೆ. ಇಂದು ಅನೇಕ ವಿದೇಶಿಗರು ನಮ್ಮ ಸನಾತನ ಸಂಸ್ಕೃತಿಯ ಕುರಿತು ಚರ್ಚಿಸುತ್ತಾರೆ. ಅದಕ್ಕೆ ನಾವು ಸಮರ್ಥವಾದ ಉತ್ತರ ನೀಡಿದಾಗ ಮಾತ್ರ ಭಾರತೀಯ ಪರಂಪರೆಯ ಬಗ್ಗೆ ಗೌರವ ದೊರೆಯಲು ಸಾಧ್ಯ. ಆ ಹಿನ್ನೆಲೆಯಲ್ಲಿ ಎಲ್ಲ ವೇದಾಧ್ಯಯನಕ್ಕೆ ಬಂದ ವಿದ್ಯಾರ್ಥಿಗಳು ಪರಿಪೂರ್ಣ ಅಧ್ಯಯನ ಮಾಡಬೇಕು ಎಂದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ವೈದಿಕ ಸಂಸ್ಕೃತಿಯಲ್ಲಿ ಪರಂಪರೆಯ ಮೌಲ್ಯ ಇದೆ. ಅದನ್ನು ಎಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ವಾರಸುದಾರರಿಗೆ ತಲುಪಿಸುವ ಕಾರ್ಯ ನೀವೆಲ್ಲ ಮಾಡಬೇಕು ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಜಗದೀಶ ದೀಕ್ಷಿತ್ ಶುಭಕೋರಿದರು. ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ. ಶ್ರೀ ಶಾರದಾಂಬಾ ಶಿಕ್ಷಣ ಸಮಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ ವಂದಿಸಿದರು, ಅಧ್ಯಾಪಕ ಡಾ.ಶಿವರಾಮ ಭಾಗ್ವತ ನಿರ್ವಹಿಸಿದರು.




