





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರು ಗ್ರಾಮಪಂಚಾಯತದಲ್ಲಿ ಮಂಗಳವಾರ ಅವಿಶ್ವಾಸ ಮಂಡನೆಗೆ ದಿನ ನಿಗದಿ ಮಾಡಲಾಗಿತ್ತು. ರಾಜ್ಯ ಉಚ್ಛ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅವಿಶ್ವಾಸ ಮಂಡನೆ ಅರ್ಧಕ್ಕೆ ಕೈ ಬಿಟ್ಟ ಘಟನೆ ನಡೆದಿದೆ.

ಮದನೂರು ಗ್ರಾಮ ಪಂಚಾಯತ ಒಟ್ಟು 13 ಸದಸ್ಯ ಬಲ ಹೊಂದಿದ್ದು ಸದ್ಯ ರಾಜೇಶ ಗಣಪತಿ ತಿನೇಕರ್ ಅಧ್ಯಕ್ಷ ಸ್ಥಾನದಲ್ಲಿದ್ದು ಅವರ ಮೇಲೆ ಅವಿಶ್ವಾಸ ಮಂಡನೆಗೆ 10 ಸದಸ್ಯರ ತಂಡ ಸಿದ್ಧವಾಗಿತ್ತು. ಈ ಮೊದಲೇ ಅವಿಶ್ವಾಸ ಮಂಡನೆಗೆ ಮೇ 14 ರಂದು ದಿನ ನಿಗದಿಯಾದಂತೆ ಚುನಾವಣಾಧಿಕಾರಿಯಾಗಿ ಶಿರಸಿ ಉಪವಿಭಾಗಾಧಿಕಾರಿ ಅನುಪಮಾ ರಮೇಶ ಪ್ರಕ್ರಿಯೆ ಕೈಗೊಂಡಿದ್ದರು. ಈ ವೇಳೆಗೆ ಹಾಜರಿದ್ದ ಸದಸ್ಯರಲ್ಲಿ 10 ಜನ ಸದಸ್ಯರು ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಕೈ ಎತ್ತಿ ಸಮ್ಮತಿ ಸೂಚಿಸಿದ್ದರು. ಆದರೆ ಆ ವೇಳೆಗಾಗಲೇ ರಾಜ್ಯದ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದೆ ಎಂದು ದೂರವಾಣಿ ಕರೆಬಂದ ಕಾರಣ ಅವಿಶ್ವಾಸ ಗೊತ್ತುವಳಿಯ ಚಿತ್ರಣವೇ ಬದಲಾಯಿತು.



ಚುನಾವಣಾ ಅಧಿಕಾರಿಯಾಗಿ ಪ್ರಕ್ರಿಯೆಗೆ ಮುಂದಾದ ಶಿರಸಿ ಉಪ ವಿಭಾಗಾಧಿಕಾರಿ ಮೇಲಾಧಿಕಾರಿಗಳ ಸಲಹೆ ಪಡೆದು ಅವಿಶ್ವಾಸವನ್ನು ರದ್ದುಗೊಳಿಸಿ ಠರಾವು ಬರೆದರು. ಈ ಹಿಂದೆ ಬಿಜೆಪಿ ಬೆಂಬಲದಿಂದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಮದನೂರು ಪಂಚಾಯತ ಅಧ್ಯಕ್ಷ ರಾಜೇಶ್ ಕೆಳಗಿಳಿಸಲು ಸಿದ್ದತೆ ಪ್ರಾರಂಭವಾಗಿತ್ತು. ಶಾಸಕ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಲೇ ಈ ಕಾರ್ಯಕ್ಕೆ ಮತ್ತಷ್ಟು ವೇಗ ಪಡೆಯಿತು.

ಬಿಜೆಪಿ ಬೆಂಬಲದಿಂದ ಅಧ್ಯಕ್ಷ ಸ್ಥಾನದಲ್ಲಿ ಕುಳಿತ ವ್ಯಕ್ತಿಯನ್ನು ಕೆಳಗಿಳಿಸಲು 1೦ ಸದಸ್ಯರ ತಂಡ ಸಿದ್ಧವಾಗಿ ತೆರೆಮರೆಯಲ್ಲಿ ಬಿಜೆಪಿ ನಾಯಕರ ಕಸರತ್ತು ಅದಕ್ಕೆ ವಿರುದ್ಧ ತಯಾರಿಯಲ್ಲಿ ಕಾಂಗ್ರೆಸ್ಸಿನ ಕರಾಮತ್ತು ಅವಿಶ್ವಾಸ ಗೊತ್ತುವಳಿಗೆ ರಂಗು ತುಂಬಿತು. ಎರಡೂ ಬಣದ ನಾಯಕರ ನಡುವಿನ ಜಟಾಪಟಿಯಲ್ಲಿ ಬಿಜೆಪಿ ಮುಖಂಡರಿಗೆ ಮೊದಲ ಹಿನ್ನಡೆಯಾಗಿದ್ದು ತಡೆಯಾಜ್ಞೆ ಬಂದಿದೆ. ಈ ವಿಚಾರ ಕೇಳುತ್ತಲೇ ಅವಿಶ್ವಾಸ ಮಂಡನೆಯ ಪರವಾದ ಸದಸ್ಯರು ಕೆಂಡಾಮಂಡಲರಾಗಿ ಚುನಾವಣಾಧಿಕಾರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸದ್ಯ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದು ಮುಂದೇನಾಗಬಹುದೋ ಕಾದು ನೋಡಬೇಕಿದೆ.


Prathidvani Yellapura