
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಕಿರವತ್ತಿ ಅತಿ ದೊಡ್ಡ ಪಂಚಾಯತವಾಗಿದ್ದು ವಿಶಾಲವಾದ ಭೂ ವ್ಯಾಪ್ತಿ ಹೊಂದಿದೆ. ಪಟ್ಟಣದಿಂದ 20 ಕಿಲೋಮೀಟರ್ ದೂರವಿದ್ದು ಇಲ್ಲಿಯೆ ಒಂದು ಪೊಲೀಸ್ ಉಪಠಾಣೆ ಇದ್ದರೆ ಸಾರ್ವಜನಿಕರಿಗೆ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗು ಸಾರ್ವಜನಿಕರಿಗೆ ಸೇವೆ ತ್ವರಿತವಾಗಿ ತಲುಪಲು ಸಾದ್ಯವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ನೂತನ ಪೋಲಿಸ್ ಉಪಠಾಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಪೊಲೀಸ್ ಸೇವೆ ಲಭ್ಯವಾಗುವಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕಿರವತ್ತಿ, ಮದನೂರ ಪ್ರದೇಶದ ಜನರ ಬಹುಕಾಲದ ಬೇಡಿಕೆಯಾಗಿದ್ದ ಪೋಲಿಸ್ ಠಾಣೆ ಇಂದು ಕಾರ್ಯರೂಪಕ್ಕೆ ಬಂದಿರುವುದು ಸಂತೋಷದ ವಿಷಯವೆಂದು ಅವರು ಹೇಳಿದರು. ಸಾರ್ವಜನಿಕರು ಕಾನೂನು ಪಾಲನೆಗೆ ಸಹಕರಿಸಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಠಾಣೆ ಅನುಷ್ಟಾನವಾಗುವಲ್ಲಿ ಸರ್ಕಾರ ಮಟ್ಟದಲ್ಲಿ ನಿರಂತರ ಪ್ರಯತ್ನಿಸಿ ಯಶಸ್ವಿಯಾಗಿಸಿದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ವತಿಯಿಂದ ಗೌರವಿಸಿ ಸನ್ಮನಿಸಲಾಯಿತು.

ಡಿ.ವೈ.ಎಸ್.ಪಿ ಗೀತಾ ಪಾಟೀಲ್, ಕಿರವತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಮಿರಾಶಿ, ಪ್ರಮುಖರಾದ ರಾಘವೇಂದ್ರ ಗೊಂದಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.





Prathidvani Yellapura