
ಪ್ರತಿಧ್ವನಿ ಯಲ್ಲಾಪುರ : ಮೊಬೈಲ್ ಮಾಯೆಯಲ್ಲಿ ಮರೆಯಾಗುತ್ತಿರುವ ಧರ್ಮ,ಸಂಸ್ಕಾರಗಳ ನಡುವೆ ಪ್ರತಿ ಮನೆಗು ತಾಯಿ ಭಾರತ ಮಾತೆಯ ಭಾವಚಿತ್ರ ನೀಡುವ ದೇಶಭಕ್ತಿ ಕಾರ್ಯಕ್ರಮ ಅರ್ಥಪೂರ್ಣ. ಯಲ್ಲಾಪುರದಲ್ಲಿ ನಡೆಯುವ ಹಿಂದೂ ಧರ್ಮದ ವಿಚಾರದ ಯಾವುದೆ ಕಾರ್ಯಕ್ರಮದಲ್ಲಿ ರವೀಂದ್ರ ನಗರದ ನಾಗರಿಕರು ತೊಡಗಿಸಿಕೊಳ್ಳುವ ರೀತಿ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕೇವಲ ರವೀಂದ್ರ ನಗರದ ಮನೆಗಳಿಗೆ ಮಾತ್ರವಲ್ಲದೆ ಊರಿನ ಸಮಸ್ತ ಮನೆಗು ಭಾರತ ಮಾತೆಯ ಭಾವಚಿತ್ರ ವಿತರಿಸುವ ಸಾತ್ವಿಕ ಸದುದ್ದೇಶದ ರಾಷ್ಟ್ರ ಪ್ರೇಮದ ಕೆಲಸವಾಗಲಿ ಎಂದು ಸಮಾಜ ಸೇವಕ ಉದ್ಯಮಿ ಬಾಲಕೃಷ್ಣ ನಾಯಕ್ ಹೇಳಿದರು.

ಅವರು ಪಟ್ಟಣದ ರವೀಂದ್ರ ನಗರದ ಸಭಾಭವನದಲ್ಲಿ ಸೋಮೇಶ್ವರ ನಾಯ್ಕ್ ಅಭಿಮಾನಿ ಬಳಗದಿಂದ ಹಮ್ಮಿಕೊಂಡ ಯುಗಾದಿ ಉತ್ಸವ ನಿಮಿತ್ತ ಮನೆಮನೆಗೆ ಭಾರತ ಮಾತೆ ಭಾವಚಿತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರತಿ ನಾಗರಿಕನಿಗು ಈ ಮಣ್ಣಿನ ಬಗ್ಗೆ ಶ್ರದ್ದೆ ಭಕ್ತಿ ಇರಬೇಕು ಮತ್ತು ಭವಿಷ್ಯದ ಪೀಳಿಗೆಗೆ ಅದರ ಮಹತ್ವ ಅರ್ಥೈಸಬೇಕು. ಹಿಂದೂಗಳ ನೂತನ ವರ್ಷ ಯುಗಾದಿ ಉತ್ಸವದ ಆಚರಣೆ ಸಂದರ್ಭದಲ್ಲಿ ಭಾರತಮಾತೆಯ ಭಾವಚಿತ್ರ ಮನೆಮನೆಗೆ ತಲುಪಿಸುವ ಶ್ರೇಷ್ಠ ಕಾರ್ಯಕ್ಕೆ ರವೀಂದ್ರ ನಗರದಿಂದ ಚಾಲನೆ ನೀಡಿರುವುದು ಅರ್ಥಪೂರ್ಣವಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಅಭಿನಂದಿಸಿದರು.

ರವೀಂದ್ರ ನಗರದ 17/18 ವಾರ್ಡಗಳಲ್ಲಿನ 300 ಕ್ಕು ಅಧಿಕ ಮನೆಗಳಿಗೆ ಭಾರತಾತೆಯ ಭಾವಚಿತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ದೊರೆಯಿತು. ಪ್ರತಿ ಮನೆಗಳಲ್ಲಿ ಭಾರತ ಮಾತೆಗೆ ನಿತ್ಯ ಪೂಜೆ ಸಲ್ಲಬೇಕು ಎಂಬುದು ಹಿಂದೂ ಮುಖಂಡ ಸೋಮೇಶ್ವರ ನಾಯ್ಕ್ ಅವರ ಧರ್ಮಬದ್ದತೆ ಮತ್ತು ರಾಷ್ಟ್ರ ಭಕ್ತಿಯ ಆಶಯವನ್ನು ಅವರ ಅಭಿಮಾನಿಗಳು ನೆರವೇರಿಸುತ್ತಿರುವುದಕ್ಕೆ ಉಪಸ್ಥಿತರಿದ್ದ ಅತಿಥಿಗಳು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.

ವೇದಿಕೆ ಯಲ್ಲಿ ನಾಗೇಂದ್ರ ಭಟ್. ಕುಮುದ ಸಾಣೆ. ರಾಧ ಮರಾಠೇ. ಆನಂದ ಜಿ ಅತ್ತರ್ವಾಲ. ರಾಜು ಬದ್ದಿ. ಬಾಬು ದೇಸಾಯಿ. ನರೇಶ್ ಯಾಮಕೆ. ಗಿರೀಶ್ ಭೋವಿ ವಡ್ಡರ್. ಸೋಮೇಶ್ವರ ನಾಯ್ಕ್ ಉಪಸ್ಥಿತರಿದ್ದರು.




Prathidvani Yellapura