Breaking News

ಸದ್ದು, ಗದ್ದಲ ಧರಣಿಯ ನಡುವೆ ನಡೆದ ಯಲ್ಲಾಪುರ ಪಟ್ಟಣ ಪಂಚಾಯತ ಸಾಮಾನ್ಯ ಸಭೆ.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಜಾತ್ರೆಯ ಲೆಕ್ಕಾಚಾರ ಕೇಳುತ್ತಲೇ ಮತ್ತೊಂದು ಜಾತ್ರೆ ಹತ್ತಿರ ಬರುತ್ತಿದೆ. ಆಡಳಿತಾಧಿಕಾರಿ ಅವಧಿಯಲ್ಲಿ ನಡೆದ ಪ.ಪಂ ಲೆಕ್ಕಾಚಾರ ಸಭೆಯಲ್ಲಿ ಇನ್ನೂ ಮಂಡನೆಯಾಗಿಲ್ಲ. ಧಾತ್ರಿ ಬಡಾವಣೆಯನ್ನು ಸುಪರ್ದಿಗೆ ಪಡೆದ ವಿಚಾರವನ್ನೂ ಸದಸ್ಯರಿಗೆ ತಿಳಿಸಿಲ್ಲ. ಕೇವಲ ಅನುಮೋದನೆಗೆ , ಸಹಿಗಾಗಿ ಸದಸ್ಯರನ್ನು ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಯಾವ ಮಾಹಿತಿಯೂ ಸದಸ್ಯರಿಗೆ ದೊರೆಯುತ್ತಿಲ್ಲ. ಯಾವ ಪುರುಷಾರ್ಥಕ್ಕೆ ವಾರ್ಡ್ ಮೆಂಬರ್ ಆಗಿ ಮುಂದುವರೆಯಬೇಕು? ಅಧಿಕಾರದ ಅವಧಿಯೂ ಮುಗಿಯುತ್ತಾ ಬರುತ್ತಿದೆ. ಮತದಾರರಿಗೆ ಏನೆಂದು ಹೇಳಬೇಕು? ಮನಸೋ ಇಚ್ಚೆ ತನಗಿಷ್ಟ ಬಂದಂತೆ ಅಧಿಕಾರ ನಡೆಸುವ ಮುಖ್ಯಾಧಿಕಾರಿ ಸುನಿಲ್ ಗಾವಡೆ ನಡೆಯನ್ನು ಖಂಡಿಸುತ್ತೇನೆ ಎಂದು ಮಂಜುನಾಥ ನಗರ ವಾರ್ಡ್ ಸದಸ್ಯ ಸತೀಶ ಶಿವಾನಂದ ನಾಯ್ಕ ಆಕ್ರೋಶ ಹೊರ ಹಾಕಿದರು.


ಶುಕ್ರವಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ಕರೆಯಲಾದ ಸಾಮಾನ್ಯ ಸಭೆಯ ಪ್ರಾರಂಭಕ್ಕೂ ಮುನ್ನಾ ಅಧ್ಯಕ್ಷರ ಮುಂದೆ ಧರಣಿ ಕುಳಿತು ಮಾತನಾಡಿದರು.


ಇದಕ್ಕೂ ಮೊದಲು ಅಂಬೇಡ್ಕರ್ ನಗರ ವಾರ್ಡ್ ಸದಸ್ಯ ರವಿ ಪಾಟಣಕರ , ಕೋರ್ಟ್ ವಾರ್ಡ್ ಸದಸ್ಯೆ ಶಾಮಿಲಿ ಪಾಟಣಕರ, ಉದ್ಯಮನಗರ ವಾಡ್೯ ಸದಸ್ಯ ನಾಗರಾಜ್ ಅಂಕೋಲೆಕರ್ ಅಂಬೇಡ್ಕರ್ ನಗರದಲ್ಲಿ ನಿರ್ಮಿಸಬೇಕಾದ ಅಂಗನವಾಡಿ ವಿಚಾರದ ಕುರಿತು ಸ್ಪಷ್ಟ ಮಾಹಿತಿ ನೀಡದೇ, ಕೊಟ್ಟ ಮಾತನ್ನೂ ನೆರವೇರಿಸದೇ ನೂತನವಾಗಿ ಅಂಗನವಾಡಿ ಕಟ್ಟಡ ನಿರ್ಮಾಣವನ್ನೂ ಪ್ರಾರಂಭಿಸದೇ ನಿರ್ಲಕ್ಷ್ಯ ತೋರುತ್ತಿರುವ ಮುಖ್ಯಾಧಿಕಾರಿ ಸುನಿಲ್ ಗಾವಡೆ ವಿರುದ್ಧ ಅಸಮಾಧಾನ ಹೊರಹಾಕಿ ಸಭೆಯ ಅಧ್ಯಕ್ಷರ ಮುಂಭಾಗದಲ್ಲಿ ಪ್ರತಿ ಭಟನೆ ನಡೆಸಿದರು.


ಇದಕ್ಕೆ ಉತ್ತರಿಸಲು ಮುಂದಾದ ಮುಖ್ಯಾಧಿಕಾರಿ ಸುನಿಲ್ ಗಾವಡೆ ಮಾತಿಗೆ ಮನ್ನಣೆ ನೀಡದೇ ಲಿಖಿತ ರೂಪದಲ್ಲಿ ಉತ್ತರಿಸುವಂತೆ ಪಟ್ಟು ಹಿಡಿದು ಕೊನೆಗೂ ಲಿಖಿತ ರೂಪದಲ್ಲೇ ಉತ್ತರವನ್ನೂ ಪಡೆದರು.


ಕಳೆದ ಹಲವು ಸಭೆಗಳಿಂದಲೂ ಯಲ್ಲಾಪುರ ಗ್ರಾಮದೇವಿಯ ಕಳೆದ ಜಾತ್ರೆಯ ಲೆಕ್ಕಾಚಾರ ನೀಡಲು ಕೇಳುತ್ತಿದ್ದರೂ ಸಭೆಯ ದಿಕ್ಕು ತಪ್ಪಿಸುತ್ತಾ ಮುಂದೂಡುತ್ತಾ ಬಂದಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಹಲವು ಜನರ ಸಮಸ್ಯೆಗಳ ಹೊತ್ತು ಪ.ಪಂಗೆ ಬಂದರೆ ಯಾವ ಅಧಿಕಾರಿಗಳೂ ಕೈಗೆ ಸಿಗುವುದಿಲ್ಲ. ಪ್ರಮುಖವಾಗಿ ಮುಖ್ಯಾಧಿಕಾರಿಗಳೇ ಇರುವುದಿಲ್ಲ. ವೀಡಿಯೋ ಕಾನ್ಫರೆನ್ಸ್ ಸಭೆ, ಕಾರವಾರ ಭೇಟಿ ಎಂದೆಲ್ಲಾ ಸಬೂಬು ನೀಡುತ್ತಾರೆ ಹೊರತು ಸದಸ್ಯರ ಕೆಲಸಗಳು ಆಗುತ್ತಿಲ್ಲ. ಹದಿನೇಳು ತಿಂಗಳುಗಳ ಕಾಲ ಮುಖ್ಯಾಧಿಕಾರಿ ಆಡಳಿತವಿದ್ದಾಗಿನ ಲೆಕ್ಕಾಚಾರ ಹಾಗೂ ಗ್ರಾಮದೇವಿ ಜಾತ್ರಾ ಲೆಕ್ಕಾಚಾರ ನೀಡಲೇಬೆಕೆಂದು ಸದಸ್ಯ ರಾಧಾಕೃಷ್ಣ ನಾಯ್ಕ ಧರಣಿಯಲ್ಲಿ ಪಾಲ್ಗೊಂಡರು.


ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಸುನಂದಾ ದಾಸ್, ಸದಸ್ಯರಾದ ಹಲೀಮಾ ಕಕ್ಕೇರಿ, ಗೀತಾ ದೇಶ ಭಂಡಾರಿ, ನಾಮ ನಿರ್ದೇಶಿತ ಸದಸ್ಯೆ ಕುಮುದಾ ಸಾಣೆ ಧರಣಿಯಲ್ಲಿ ಪಾಲ್ಗೊಂಡು ಪ್ರತಿಭಟಿಸಿದರು.


ಕೊನೆಗೂ ಧರಣಿ, ಪ್ರತಿಭಟನೆಗೆ ಮಣಿದ ಪ.ಪಂ ಮುಖ್ಯಾಧಿಕಾರಿ ಸುನಿಲ್ ಗಾವಡೆ ಮಾ.19ರಂದು ವಿಶೇಷ ಸಭೆ ಕರೆದು ಲೆಕ್ಕಾಚಾರ ನೀಡುವುದಾಗಿ ಭರವಸೆ ನೀಡಿದರು
ಸಭೆಯಲ್ಲಿ ಚರ್ಚಿಸಬೇಕಿದ್ದ ಕೆಲ ವಿಷಯಗಳಿಗೆ ಸಮಯಾವಕಾಶದ ಕೊರತೆಯಾಗಿದ್ದು ಹಲವು ವಿಚಾರಗಳನ್ನು ವಿವಿಧ ವಾರ್ಡ್ ಸದಸ್ಯರು ಚರ್ಚಿಸಿದರು.
ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ನೂತನ ನಗರ ಅಲಿ, ಮುಖ್ಯಾಧಿಕಾರಿ ಸುನಿಲ್ ಗಾವಡೆ ಸಭೆಯಲ್ಲಿ ಉಪಸ್ಥಿತರಿದ್ದರು.
ಎನ್.ಎ ಆಗದ ಭೂಮಿಗೆ ಸಾರ್ವಜನಿಕ ಸೌಲಭ್ಯಕ್ಕಾಗಿ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿದ್ದು ಕೊನೆಗೆ ಈ ವಿಚಾರದ ಬಗ್ಗೆ ತಕರಾರು ಎತ್ತಿ ಮುಖ್ಯಮಂತ್ರಿಗಳವರೆಗೂ ದೂರು ನೀಡಿದ್ದು ಕಾಮಗಾರಿ ನಿಲ್ಲಿಸಲಾಗಿದೆ. ಅದಾಗಲೇ ಗುತ್ತಿಗೆದಾರ ಕೆಲಸ ಪ್ರಾರಂಭಿಸಿದ್ದರಿಂದ ಮೇಲಿಂದ ಮೇಲೆ ತಕರಾರು ಎತ್ತಿದ ಪರಿಣಾಮ ಭೂ ಪರಿವರ್ತನೆಯಾಗದ ಕ್ಷೇತ್ರಕ್ಕೆ ಹಣ ನೀಡುವ ಬದಲು ಅದೇ ಹಣವನ್ನು ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಗೆ ನೀಡುವಂತೆ ನೂತನ ನಗರ ವಾರ್ಡ್ ಸದಸ್ಯೆ ಪುಷ್ಪಾ ನಾಯ್ಕ ಸಭೆಗೆ ತಿಳಿಸಿದರು. ನಿರ್ಧಾರ ಸ್ವಾಗತಿಸಿದ ಹಲವು ಸದಸ್ಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.


ನೂತನವಾಗಿ ನಿರ್ಮಾಣಗೊಂಡಿರುವ, ನಿರ್ಮಾಣಗೊಳ್ಳುತ್ತಿರುವ ಬಡಾವಣೆಗಳ ಮಾಹಿತಿಯೇ ಸಭೆಗಾಗಲೀ ಸದಸ್ಯರಿಗಾಗಲೀ ತಿಳಿಯುತ್ತಿಲ್ಲ. ಒಂದು ಬಡಾವಣೆ ನಿರ್ಮಾಣಗೊಂಡು ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಅನುಷ್ಠಾನಗೊಂಡು ಕನಿಷ್ಠ ಎರಡು ವರ್ಷದ ಅವಧಿಯವರೆಗೂ ಬಡಾವಣೆ ನಿರ್ಮಾತೃ ನಿರ್ವಹಿಸಿದ ನಂತರ ಪ.ಪಂ ತನ್ನ ಸುಪರ್ದಿಗೆ ಪಡೆಯಬೆಕಿದೆ. ಆದರೆ ಬಡಾವಣೆಯ ನಿರ್ಮಾತೃ ತನಗೂ ಇದಕ್ಕೂ ಸಂಬಂಧವಿಲ್ಲ ಎಂಬರ್ಥದಲ್ಲಿ ಪತ್ರ ಬರೆದಿದ್ದಾರೆ. ಪ.ಪಂ ಕಾನೂನುಗಳನ್ನೆಲ್ಲಾ ಗಾಳಿಗೆ ತೂರಿ ಸುಪರ್ಧಿಗೆ ಪಡೆದಿದ್ದು ಇದೀಗ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಾರ್ವಜನಿಕ ತೆರಿಗೆ ಹಣವನ್ನು ವ್ಯಯಿಸುವ ತೀರ್ಮಾನಕ್ಕೆ ಬರುತ್ತಿರುವುದು ಅಕ್ಷಮ್ಯವಾಗಿದೆ. ಈ ಅವ್ಯವಹಾರದಲ್ಲಿ ಭಾರೀ ಹಣದ ವಹಿವಾಟು ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಆಯಾ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳಾಗಿದ್ದವರನ್ನು ತನಿಖೆಗೊಳಪಡಿಸಬೇಕಿದೆ. – ಸತೀಶ ಶಿವಾನಂದ ನಾಯ್ಕ, ಮಂಜುನಾಥನಗರ ಸದಸ್ಯ


ಅಂಬೇಡ್ಕರ್ ನಗರದಲ್ಲಿನ ಮಕ್ಕಳಿಗೆ ಅಂಗನವಾಡಿ ಅವಶ್ಯಕತೆ ಇದ್ದು ಸದ್ಯ ಕಟ್ಟಡ ಇಲ್ಲದ ಕಾರಣ ಬೇರೊಂದು ಸ್ಥಳದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಟ್ಟಡ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳೇ ಕಾರಣವಾಗಿದ್ದು ಪ.ಪಂದ ಒಂದು ಕೊಠಡಿಯನ್ನು ಅಂಗನವಾಡಿಗೆ ಬಿಟ್ಟುಕೊಡಲಿ ಎಂದು ರವೀಂದ್ರನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಆಗ್ರಹಿಸಿದರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *