


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಸದ ರಾಶಿಗೆ ಬೆಂಕಿ ಹಾಕಿದಾಗ ಇದ್ದಕ್ಕಿದ್ದಂತೆ ದೊಡ್ಡ ಮಟ್ಟದ ಸ್ಪೋಟವಾಗಿದ್ದು ಸ್ಪೋಟದ ತೀವ್ರತೆಗೆ ಪಕ್ಕದಲ್ಲೇ ಇದ್ದ ವ್ಯಕ್ತಿಯೋರ್ವರ ಕೈ,ಕಾಲು, ಕೆನ್ನೆಯ ಭಾಗಗಳು ಸುಟ್ಟುಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಟ್ಟಡದ ಹಿಂಭಾಗದಲ್ಲಿ ಬಿದ್ದಿರುವ ಕಸದ ರಾಶಿಗೆ ಪಕ್ಕದಲ್ಲೇ ಇದ್ದ ಮನೆ ಮಾಲೀಕ , ಬ್ಯಾಂಕ್ ಉದ್ಯೋಗಿ ಅಶೋಕ ಜಯರಾಮ ಪಾಟಣಕರ ಎಂಬುವರು ಬೆಂಕಿ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಕಸದ ರಾಶಿಯಲ್ಲಿದ್ದ ಮೂಟೆಗಳು ಇದ್ದಕ್ಕಿದ್ದಂತೆ ದೊಡ್ಡದಾಗಿ ಸ್ಪೋಟಿಸಿದ್ದು ಪಕ್ಕದಲ್ಲೇ ಇದ್ದ ಅಶೋಕ ಪಾಟಣಕರ ಅವರ ಬಲಗಾಲು, ಬಲಗೈ ಮತ್ತು ಬಲಭಾಗದ ಕೆನ್ನೆಗಳಿಗೆ ಬಹುಪಾಲು ಸುಟ್ಟ ಗಾಯಗಳಾಗಿವೆ. ನಂತರ ಯಲ್ಲಾಪುರದ ತಾಲೂಕು ಆಸ್ಪತ್ರೆಗೆ ಸ್ನೇಹಿತರ ಸಹಾಯದಿಂದ ಹೋಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ಆಸ್ಪತ್ರೆಗೆ ಬಂದು ಮಾಹಿತಿ ಪಡೆದಿದ್ದಾರೆ. ನಡೆದ ಘಟನೆಯಿಂದ ಆತಂಕಗೊಂಡು ಸ್ಪೋಟಕ್ಕೆ ನಿಖರ ಕಾರಣ ತಿಳಿಯದಾಗಿದ್ದು ಪೊಲೀಸರಿಂದಲೂ ಯಾವುದೇ ಮಾಹಿತಿ ದೊರೆಯದ ಕಾರಣ ಮಾದ್ಯಮಕ್ಕೆ ಘಟನೆಯ ಸ್ಥಳಕ್ಕೆ ತೆರಳಿ ಮಾಹಿತಿ ನೀಡಿದ್ದಾರೆ.

ಸ್ಪೋಟಗೊಂಡ ಸ್ಥಳ ಸರ್ಕಾರಿ ಇಲಾಖೆಯೊಂದರ ಸುಪರ್ದಿಗೆ ಸೇರಿದ್ದು ಸರಿಯಾದ ನಿರ್ವಹಣೆ, ಜವಾಬ್ದಾರಿಯುತ ಹೊಣೆಗಾರಿಕೆಯೂ ಇಲ್ಲದೇ ಆ ಪ್ರದೇಶದ ತ್ಯಾಜ್ಯಗಳನ್ನು ತಂದು ಸುರಿಯುವ ಕಸದ ಅಡ್ಡೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೊ, ಸ್ಥಳೀಯರಿಗೆ ಸರ್ಕಾರಿ ಜಾಗವೆಂಬ ತಾತ್ಸಾರವೋ ಎಂಬುದು ತಿಳಿಯದಾಗಿದೆ.

ಕಳೆದ ಕೆಲದಿನಗಳ ಹಿಂದಷ್ಟೇ ಬೆಂಗಳೂರಿನ ರಾಮೇಶ್ವರ ಕೆಫೆ ಸ್ಪೋಟ ಪ್ರಕರಣ ಹಸಿಯಾಗಿರುವಾಗಲೇ ಯಲ್ಲಾಪುರದಂತಹ ಸಣ್ಣ ತಾಲೂಕಿನ ಪಟ್ಟಣ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿರುವುದು ಆತಂಕದ ವಿಷಯವೇ ಆಗಿದೆ.

ಸ್ಪೋಟದ ನಂತರ ಕಸದ ರಾಶಿಯಲ್ಲಿ ಕೆಲವು ವಸ್ತುಗಳು ದೊರೆತಿದ್ದು ಅವು ಆಭರಣ ಹಾಗೂ ಇತರೆ ಕೆಲಸಗಳಿಗೆ ಸಾಲ್ಡರಿಂಗ್ ಮಾಡಲು ಬಳಸುವ ಗ್ಯಾಸ್ ಲೈಟರ್ ದೊರೆತಿದ್ದು ಸ್ಪೋಟಕ್ಕೆ ಕಾರಣವಾಗಿರಬಹುದು ಎಂಬುದು ಸ್ಥಳದಲ್ಲಿದ್ದವರ ಅಭಿಪ್ರಾಯವಾಗಿದೆ.

ಮಕ್ಕಳು, ಹಿರಿಯರು, ಮಹಿಳೆಯರು ಸ್ಥಳದಿಂದ ದೂರದಲ್ಲಿದ್ದ ಕಾರಣ ಅದೃಷ್ಟವಶಾತ್ ಬೇರಾರಿಗೂ ಗಾಯಗಳಾಗಿಲ್ಲ. ಇದನ್ನು ನಿರ್ಲಕ್ಷಿಸದೇ ಕಾರಣ ಏನೆಂಬುದನ್ನು ನಿಖರವಾಗಿ ಕಂಡು ಹಿಡಿಯಬೇಕಿದೆ ಹಾಗೂ ಈ ಪ್ರದೇಶದ ಸುತ್ತಮುತ್ತ ತ್ಯಾಜ್ಯ ತಂದು ಸುರಿಯದಂತೆ ಸಮರ್ಪಕವಾದ ತಡೆಗೋಡೆ ನಿರ್ಮಿಸಬೇಕಿದೆ ಎಂಬುದು ಸ್ಪೋಟದಿಂದ ಗಾಯಗೊಂಡ ಬ್ಯಾಂಕ್ ಉದ್ಯೋಗಿ ಅಶೋಕ ಪಾಟಣಕರ ಅವರ ಕುಟ ಅಭಿಪ್ರಾಯವಾಗಿದೆ.
Prathidvani Yellapura