
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಬಿಳಿಯ ಪಂಚೆ, ಬಿಳಿಯ ಷರ್ಟ್ ಶ್ವೇತವಸ್ತ್ರಧಾರಿಯಾಗಿ ಕಾಲಿಗೆ ಪಾದರಕ್ಷೆ ಧರಿಸದೇ ಸಂತನ ರೂಪದಲ್ಲಿ ಕಾಣಿಸುತ್ತಿದ್ದ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಗುರುರಾಜ್ ಶೆಟ್ಟಿ ಗಂಟಿಹೊಳೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಒಲಿದಿದೆ.
ಬೈಂದೂರು ಟಿಕೆಟ್ ವಿಚಾರಕ್ಕೂ ಯಲ್ಲಾಪುರಕ್ಕೂ ಏನು ಸಂಬಂಧ ಎಂದರೆ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಮಾಜಿ ಶಾಸಕ ಉಮೇಶ್ ಭಟ್ಟರ ನಿಧನದ ನಂತರ ಸಂಸ್ಥೆಯನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ಯಲ್ಲಾಪುರ ತಾಲೂಕಿನ ಮೂಲದವರಾದ ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಹರಿಪ್ರಕಾಶ್ ಕೋಣೇಮನೆ ವಹಿಸಿಕೊಂಡರು. ನಂತರ ಸಂಸ್ಥೆಯ ಉನ್ನತಿಗೆ ಮೊದಲು ತೆಗೆದುಕೊಂಡ ನಿರ್ಧಾರವೆ ಸಂಸ್ಥೆಯ ಸಿಇಒ ಪಟ್ಟವನ್ನು ಇದೇ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಹೆಗಲಿಗೆ ಹೊರಿಸಿದ್ದು.

ಸಂಸ್ಥೆ ಶರವೇಗದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿತಲ್ಲದೇ ಕೆಂದ್ರೀಯ ಶಾಲೆ ಮಾನ್ಯತೆಯನ್ನೂ ಪಡೆಯಿತು.
ಅಲ್ಲಿನ ಸಿಬ್ಬಂದಿಗಳೇ ಹೇಳುವಂತೆ ಪ್ರತಿ ನಡೆಯಲ್ಲೂ ಶಿಸ್ತು, ಸಂಯಮ ಮತ್ತು ದೇಶಭಕ್ತಿಯ ಬಗ್ಗೆ ಎಲ್ಲರಿಗೂ ತಿಳಿಹೇಳುತ್ತಿದ್ದರು. ಅಧಿಕಾರವಿದೆ ಎಂದು ಎಂದಿಗೂ ತೋರ್ಪಡಿಸಿಕೊಂಡವರಲ್ಲ.

ಸಂಸ್ಥೆಗೆ ಭೇಟಿ ನೀಡಿದ ರಾಜ್ಯಮಟ್ಟದ ನಾಯಕರು, ಮಂತ್ರಿಗಳು, ಉದ್ಯಮಿಗಳು , ಕ್ರೀಡಾಪಟುಗಳು ಇನ್ನೂ ಅನೇಕ ಮಹನೀಯರ ಮುಂದೆ ಏನೂ ತಿಳಿಯದವರಂತೆ ಸರಳ ವ್ಯಕ್ತಿಯಾಗಿ ಪರಿಚಯಿಸಿಕೊಳ್ಳುತ್ತಿದ್ದರು. ಅಂತಹ ಸರಳ ವ್ಯಕ್ತಿತ್ವದ ವ್ಯಕ್ತಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ದೊರೆತಿರುವುದು ವಿಶೇಷವಾಗಿದೆ.

ಗುರುರಾಜ್ ಗಂಟಿಹೊಳೆ ಹುಟ್ಟಿದ್ದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದ ಬಳಿಯ ಗಂಟಿಹೊಳೆಯಲ್ಲಿ. ಪತ್ರಿಕೋದ್ಯಮದಲ್ಲಿ ಉನ್ನತಶಿಕ್ಷಣ ಪೂರೈಸಿ ಆರ್.ಎಸ್.ಎಸ್.ನ ಪೂರ್ಣಾವಧಿ ಪ್ರಚಾರಕರಾಗಿ ದೇಶದ ಹಲವು ಭಾಗಗಳಲ್ಲಿ ಸಂಚರಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಮಕ್ಕಳ ಶಿಕ್ಷಣದತ್ತ ಗಮನಹರಿಸಿ ಆರ್.ಎಸ್.ಎಸ್ ವತಿಯಿಂದ ಕರ್ನಾಟಕದ ವಿವಿದೆಡೆ ಮಕ್ಕಳನ್ನು ಓದಿಸುತ್ತಿದ್ದು ಗುರುರಾಜ ಗಂಟಿಹೊಳೆ ತಮ್ಮ ಮನೆಯಲ್ಲಿ ೨೦ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣಕ್ಕಾಗಿ ಆಶ್ರಯ ನೀಡಿದ್ದಾರೆ. ಲೇಖಕರಾಗಿ ಎರಡು ಕೃತಿಗಳನ್ನೂ ರಚಿಸಿದ್ದಾರೆ. ಕೇವಲ ಸಂಘ ಪರಿವಾರದ ಹಿನ್ನೆಲೆ ಸಾಮಾನ್ಯ ಕಾರ್ಯಕರ್ತನಾಗಿ ಟಿಕೆಟ್ ಗಿಟ್ಟಿಸಿರುವುದು ಬಿಜೆಪಿಯ ಅಚ್ಛರಿ ಆಯ್ಕೆಗಳಲ್ಲಿ ಒಂದಾಗಿದೆ.




ಒಬ್ಬ ವ್ಯಕ್ತಿಯ ಸಾಧನೆ ಅವರ ವ್ಯಕ್ತಿತ್ವವನ್ನು ಬಿಂಬಿಸುವ ಶಕ್ತಿಯಾಗಿರುತ್ತದೆ. ಮತ್ತು ಕೆಲವರಲ್ಲಿ ಅಂತಹ ಸಾಧನೆಯ ಹಿರಿಮೆಯನ್ನು ಅರಗಿಸಿಕೊಳ್ಳಬಲ್ಲ ಸರಳತೆಯು ಸಹ ಅದೇ ಸಮಯದಲ್ಲಿ ಜೊತೆಯಲಿರುತ್ತದೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿದ್ದಾರೆ ಈ ಸರಳ ವ್ಯಕ್ತಿತ್ವದ ಗುರುರಾಜ್ ಶೆಟ್ಟಿ ಗಂಟಿಹೊಳೆ. ನಿಜವಾದ ಪ್ರಜಾಪ್ರಭುತ್ವದ ಅರ್ಥ ಉಳಿದುಕೊಂಡಿರುವುದೆ ಇಂತಹ ನಡವಳಿಗಳಿಂದ. ಯಾವುದೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದರೆ ಅನುಸರಿಸುವ ಮಾನದಂಡಗಳಲ್ಲಿ ನೈತಿಕತೆ,ಸಚ್ಚಾರಿತ್ರ, ಸರಳತೆ, ಸಂಸ್ಕಾರ ಎಂಬ ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಕೇವಲ ಹಣ,ಅಂತಸ್ಥು,ಜಾತಿ,ಧರ್ಮ ಇವುಗಳಿಂದಲೆ ಎಲ್ಲವು ಸಾದ್ಯವಿಲ್ಲ. ಭವಿಷ್ಯದ ಪೀಳಿಗೆಗಾದರು ಪ್ರಜಾಪ್ರಭುತ್ವದ ನಿಜವಾದ ಮೌಲ್ಯ ಉಳಿಸಿದಂತಾಗಲಿದೆ ಅದು ಯಾವುದೆ ಪಕ್ಷದಲ್ಲಾದರು ಸರಿ ಇದನ್ನೆ ಬಯಸುವುದು ಸಮಾಜ ಎಂಬುದು ಪ್ರತಿಧ್ವನಿ ಯಲ್ಲಾಪುರದ ಕಳಕಳಿಯಾಗಿದೆ.
Prathidvani Yellapura