Breaking News

ಚುನಾವಣೆ ಮುಗಿದಿದೆ  ಕೆಲವು ಇಲಾಖೆಗಳ ಕಾರ್ಯಕ್ಕೆ ವೇಗ ಬೇಕಿದೆ. ಮಳೆಗಾಲದ ಪೂರ್ವ ತಯಾರಿ .!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ



ಪ್ರತಿಧ್ವನಿ ಯಲ್ಲಾಪುರ : ಲೋಕಸಭಾ ಚುನಾವಣೆ ಮುಗಿದು ದಿನಗಳು ಕಳೆದರು ತಾಲೂಕಿನಲ್ಲಿ ಕೆಲವು ಇಲಾಖೆಗಳು ಚುನಾವಣೆ ಮಂಪರಿಂದ ಹೊರ ಬಂದಂತೆ ಕಾಣುತ್ತಿಲ್ಲ. ನಾಲ್ಕೈದು ದಿನಗಳ ಹಿಂದೆ ಇಲಾಖೆಗಳ ಬಳಿ ಹೋದರೆ ಅಧಿಕಾರಿಗಳು ಚುನಾವಣೆಯ ನೆಪ ಹೇಳಿ ಕೆಲವು ಕೆಲಸ ಕಾರ್ಯಗಳನ್ನು ಚುನಾವಣೆ ಮುಗಿದ ನಂತರ ಮಾಡುವುದಾಗಿ ಹೇಳಿ ಸಾಗಹಾಕುವುದು ಸರ್ವೇ ಸಾಮಾನ್ಯವಾಗಿತ್ತು ಮತ್ತು ಅಧಿಕಾರಿಗಳಿಗೆ ಚುನಾವಣೆಯ ಒತ್ತಡವು ಹಾಗೇ ಇತ್ತು. ಆದರೀಗ ಚುನಾವಣೆ ಮುಗಿದಿದೆ ಮಳೆಗಾಲ ಸಮೀಪಿಸುತ್ತಿದೆ ಕೆಲವು ಪ್ರಮುಖ ಇಲಾಖೆಗಳು ಮುನ್ನೆಚ್ಚರಿಕಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಆಯಾ ಇಲಾಖೆಗಳೆ ಹೊಣೆಯಾಗಬೇಕಿದೆ ಎಂಬುದು ಪ್ರಜ್ಞಾವಂತರ ಮಾತಾಗಿದೆ.


ಹಲವು ಜ್ಯೋತಿಷಿಗಳ ಪ್ರಕಾರ ಕ್ರೋಧ ನಾಮ ಸಂವತ್ಸರದಲ್ಲಿ ಎಲ್ಲವೂ ಹೆಚ್ಚಾಗಿ ಸಂಭವಿಸಲಿದೆ ಎಂಬ ಮಾತು ಬೇಸಿಗೆಯ ಬಿಸಿಲಿನ ತಾಪ ಕಂಡಾಗ ಅರಿವಿಗೆ ಬರುತ್ತಿದೆ. ಬರಲಿರುವ ಮಳೆಗಾಲವೂ ಸಹ ಪ್ರಳಯ ರುದ್ರನಂತೆ ಧರೆಗಪ್ಪಳಿಸಿದರೆ ಪ್ರಕೃತಿಯ ಮುಂದೆ ಮನುಷ್ಯನ ಯಾವ ಕಾರ್ಯವೂ ಅನಾಹುತಗಳನ್ನು ತಪ್ಪಿಸಲಾಗುವುದಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಾಗ ಅನಾಹುತಗಳ ಪ್ರಮಾಣವನ್ನು ತಗ್ಗಿಸಬಹುದಾಗಿದೆ.


ಮಳೆಗಾಲದ ಪೂರ್ವದಲ್ಲಿ ಕೆಲವು ಪ್ರಮುಖ ಇಲಾಖೆಗಳು ಅವಶ್ಯವಾಗಿ ಕಾರ್ಯ ಪ್ರವೃತ್ತರಾಗಬೇಕಿದೆ.
ವಿದ್ಯುತ್ ಇಲಾಖೆ : ವಿದ್ಯುತ್ ಇಲಾಖೆ ಮಳೆಗಾಲ ಪೂರ್ವದಲ್ಲಿ ವಿದ್ಯುತ್ ತಂತಿಗಳಿಗೆ ಅಡಚಣೆಯಾಗದಂತೆ ಕಟಾವು ಕಾರ್ಯ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಅದೇ ಸಮಸ್ಯೆಗಳು ಸವಾಲಾಗಿ ಪರಿಣಮಿಸಲಿವೆ. ವಿದ್ಯುತ್ ವ್ಯತ್ಯಯ ಸಮಸ್ಯೆಗಳಿಂದ ದೂರ ಉಳಿಯಲು ಇಲಾಖೆ ಪೂರ್ವ ಸ್ನದ್ಧವಾಗಿ ವಿದ್ಯುತ್ ಪ್ರಸರಣಕ್ಕೆ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.


ಪಟ್ಟಣ ಪಂಚಾಯತ : ಪಟ್ಟಣ ವ್ಯಾಪ್ತಿಯಲ್ಲಿ ಅನೇಕ ಗಟಾರಗಳು ಸ್ವಚ್ಛಗೊಳ್ಳಬೇಕಿದೆ. ಇಲ್ಲವಾದಲ್ಲಿ ತಗ್ಗು ಪ್ರದೇಶಗಳಲ್ಲಿರುವ ವಾಸಸ್ಥಳಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ. ಸದಸ್ಯ ಮಳೆಗಾಲದ ಪೂರ್ವ ಕೆಲಸಮಯ ಇರುವುದಿರಿಂದ ಪೌರಕಾರ್ಮಿಕರು, ಕಾರ್ಯಪ್ರವೃತ್ತರಾಗಿ ಗಟಾರಗಳನ್ನು ಸ್ವಚ್ಛಗೊಳಿಸಿ ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅವುಗಳನ್ನು ಪರಿಹರಿಸಿಕೊಳ್ಳಬೇಕಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗದೇ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದೇ ಪ್ರತಿ ವಾರ್ಡ್ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಷ್ಕರಿಸುವ ಕುರಿತು ಸಭೆಗಳೂ ನಡೆಯದೇ ಮಳೆಗಾಲದಲ್ಲಿ ಗೊಂದಲಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಈ ಕುರಿತು ಮುಖ್ಯಾಧಿಕಾರಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.


ಅರಣ್ಯ ಇಲಾಖೆ : ವಿವಿಧ ರಸ್ತೆಗಳು ಮತ್ತು ಹೆದ್ದಾರಿಯ ಅಕ್ಕಪಕ್ಕದಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತ ಬೃಹತ್ ಮರಗಳು, ಅವುಗಳ ರೆಂಬೆಕೊಂಬೆಗಳು ಸಂಚಾರಕ್ಕೆ ತೊಡಕಾಗಿ ಪರಿಣಮಿಸುವ ಸಾಧ್ಯಯತೆ ಇರುವಂತಹ ವಾತಾವರಣವಿದ್ದರೆ ಅರಣ್ಯ ಇಲಾಖೆ ಅಂತಹ ಮರಗಳನ್ನು ಗುರುತಿಸಿ ಕಟಾವು ಕಾರ್ಯ ಈಗಲೇ ಕೈಗೊಳ್ಳಬೇಕಿದೆ. ವಿಶೇಷವಾಗಿ ಅರಬೈಲು ಘಟ್ಟ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ತಾಲೂಕಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸಿ ಗುಡ್ಡಗಳು ಕುಸಿದು ರಸ್ತೆಗಿಳಿದಿದ್ದು ಆ ಸಂದರ್ಭದಲ್ಲಿ ಸಡಿಲಾದ ಮರಗಳು ಮಣ್ಣಿನ ಅಂಶ ಬಿಟ್ಟು ಬರಿದಾದ ಮರಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪರಿಶೀಲಿಸಿ ಅವುಗಳ ತೆರವು ಕಾರ್ಯ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಘೋರ ದುರಂತಕ್ಕೆ ಕಾರಣವಾಗಿ ಸಂಚಾರಿಗಳ ಮೇಲೆ ಬಿದ್ದು ಸಆವು ಸಂಭವಿಸಿದರೆ ಕಟಕಟೆಯಲ್ಲಿ ಕೊಲೆಗಾರರ ಸ್ಥಾನದಲ್ಲಿ ಇಲಾಖೆ ನಿಲ್ಲಬೇಕಾದ ಸಂದರ್ಭ ಬರಲಿದೆ.


ಹೆದ್ದಾರಿ ನಿರ್ವಹಣಾ ಇಲಾಖೆ –  ತಾಲೂಕಿನಲ್ಲಿ ಹಾದುಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದು ಮಳೆಗಾಲದ ಪೂರ್ವದಲ್ಲಿ ಹೆದ್ದಾರಿಯ ಇಕ್ಕೆಲೆಗಳಲ್ಲಿ ಬೆಳೆದು ನಿಂತ ಕುರುಚಲು ಜೀಡನ್ನು ತೆರವುಗೊಳಿಸಬೇಕಿದೆ. ಇಲ್ಲವಾದಲ್ಲಿ ಒಂದು ಬಂದಿಯಿಂದ ಬರುತ್ತಿರುವ ವಾಹನ ಇನ್ನೊಂದು ಬದಿಯಿಂದ ಕಾಣದೇ ಅಪಘಾತವಾಗುವ ಸಂಭವವಿದೆ. ಸೂಚನಾ ಫಲಕಗಳು ಮಾಸಿ ಹೋಗಿವೆ, ಗಿಡಗಂಟಿಗಳ ಮಧ್ಯದಲ್ಲಿದ್ದು ಚಾಲಕರಿಗೆ ಕಾಣದ ಸ್ಥಿತಿ ಇದೆ. ಗುಡ್ಡ ಕುಸಿತದ ಪ್ರದೇಶಗಳಲ್ಲಿ ಮಣ್ಣು ಸದಾ ಕುಸಿಯುತ್ತಿದ್ದು ನೀರು ಹರಿದು ಸಾಗುವ ಚರಂಡಿಗಳನ್ನು ಮುಚ್ಚಿದೆ. ಇದರಿಂದ ಗಟಾರದ ನೀರೆಲ್ಲಾ ಹೆದ್ದಾರಿಯ ಮೇಲೆ ಹರಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಲಿದೆ. ಅಪಾಯಕಾರಿ ಮರಗಳ ಕುರಿತು ಅರಣ್ಯ ಇಲಾಖೆ ಸಂಪರ್ಕಿಸಿ ತೆರವು ಕಾರ್ಯವಾಗಬೇಕಿದೆ.


ಕೃಷಿ ಇಲಾಖೆ : ಬೇಸಿಗೆಯ ಝಳ ವಿಪರೀತವಾಗಿದ್ದು ಮಳೆಗಾಲಕ್ಕೂ ಮುನ್ನಾ ನೀರಿನ ಅಭಾವ ಎದುರಿಸುತ್ತಿರುವ ಕೆಲವು ಬೆಳೆಗಳ ಕುರಿತು ಕೃಷಿ ಇಲಾಖೆ ರೈತರ ಸಂಕಷ್ಟಕ್ಕೆ ಧಾವಿಸಬೇಕಿದೆ. ವಿಶೇಷವಾಗಿ ಕಬ್ಬಿನ ಬೆಳೆ ಈ ಬಾರಿಯ ಬಿಸಿಲಿನ ತಾಪಕ್ಕೆ ನೀರಿನ ಅಂಶ ಕಡಿಮೆಯಿದ್ದು ಸಮಸ್ಯೆ ಎದುರಿಸುತ್ತಿದೆ. ಮಳೆಗಾಲ ಸಮೀಪಿಸುತ್ತಿದ್ದು ರೈತರಿಗೆ ಬೇಕಾಗುವ ಭಿತ್ತನೆ ಬೀಜದ ಬೇಡಿಕೆಗೆ ಅನುಸಾರ ಬೀಜದ ದಾಸ್ತಾನು ಆಗಬೇಕಿದೆ. ಬಲ್ಲಮೂಲಗಳ ಪ್ರಕಾರ ಇಲಾಖೆ ಈಗಾಗಲೇ ಬೀಜ ದಾಸ್ತಾನಿಗೆ ಮುಂದಾಗಿದ್ದು ಕೆಲವೇ ದಿನಗಳಲ್ಲಿ ಗೋದಾಮು ಸೇರಲಿದೆ ಎಂಬ ಮಾಹಿತಿ ಇದೆ.
ಒಟ್ಟಿನಲ್ಲಿ ಚುನಾವಣೆ ಮುಗಿದು ಚುನಾವಣಾ ಕಾರ್ಯದ ಒತ್ತಡದಿಂದ ಹೊರ ಬಂದಿರುವ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಮಳೆಗಾಲ ಪೂರ್ವದ ಮುನ್ನೆಚ್ಚರಿಕಾ ಕಾರ್ಯಗಳ ಕಡೆ ಗಮನಹರಿಸಬೇಕಿದೆ.

ತಾಲೂಕು ಪಂಚಾಯತ ಅಧ್ಯಕ್ಷ- ಸದಸ್ಯರಿಲ್ಲದೇ ಬಹುಸಮಯ ಸರಿದಿದ್ದು ಆಡಳಿತಾಧಿಕಾರಿ ನೇತೃತ್ವದಲ್ಲಿ ಕೆ.ಡಿ.ಪಿ ಸಭೆಗಳು ಜರುಗುತ್ತಿವೆ. ಸದ್ಯ ಚುನಾವಣಾ ಕಾರ್ಯದಿಂದ ಸಭೆ ನಡೆಯದಿದ್ದು ಮಳೆಗಾಲ ಪೂರ್ವ ಎಲ್ಲಾ ಇಲಾಖೆಗಳ ಸಭೆ ಕರೆದು ಮುನ್ನೆಚ್ಛರಿಕಾ ಕ್ರಮಗಳ ಕುರಿತು ಚರ್ಚಿಸಬೇಕಿದೆ. ಇಲ್ಲವಾದಲ್ಲಿ ಬಾಯಾರಿದಾಗ ಬಾವಿ ತೋಡಿದಂತೆ ಸಮಸ್ಯೆ ಬಂದಾಗ ಮೈಕೊಡವಿ ನಿಂತರೆ ಪ್ರಯೋಜನವಿರದು. ಸಮಸ್ಯೆಗೂ ಮುನ್ನವೇ ಪರಿಹಾರ ಹುಡುಕಬೇಕಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *