
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ವೈ.ಟಿ.ಎಸ್.ಎಸ್ ಮೈದಾನದಲ್ಲಿ ಉತ್ತರಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಾಕ್ರೋಶ ಯಾತ್ರೆ , ಕಾಂಗ್ರೆಸ್ ಸರ್ಕಾರದ ವಿರುದ್ಧದ ಆಕ್ರೋಶವಾದರೂ ಸಂಚಲನ ಮೂಡಿಸಿರುವುದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರ ಆ ಮಾತು.

ಏ.11ರ ಶುಕ್ರವಾರ ಯಲ್ಲಾಪುರದಲ್ಲಿ ನಡೆದ ಜನಾಕ್ರೋಶ ಯಾತ್ರೆಯ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವೈ ಪುತ್ರ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಆಕ್ರೋಶ ಭರಿತ ಮಾತುಗಳನ್ನಾಡುತ್ತಲೇ 2028 ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ “ಸಾಮಾನ್ಯ ಕಾರ್ಯಕರ್ತ”ನನ್ನು ನಿಲ್ಲಿಸಿ ಚುನಾವಣಾ ಉಸ್ತುವಾರಿಯನ್ನು ನಾನೇ ನಿರ್ವಹಿಸಿ ಗೆಲ್ಲಿಸುತ್ತೇನೆ ಎಂದಿದ್ದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಕ್ಷೇತ್ರದ ರಾಜಕೀಯ ವಲಯದಲ್ಲಿ ಈಗ ಬಿಸಿ ಬಿಸಿ ಚರ್ಚೆ ಆ ಸಾಮಾನ್ಯ ಕಾರ್ಯಕರ್ತನದ್ದೇ! ಎಲ್ಲರ ಬಾಯಲ್ಲೂ ಒಂದೇ ಪ್ರಶ್ನೆ – ಯಾರು ಆ ಸಾಮಾನ್ಯ ಕಾರ್ಯಕರ್ತ?
ಹಾಲಿ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲಿದ್ದರೂ, ಕಾಂಗ್ರೆಸ್‌ನಲ್ಲಿದ್ದರೂ ಕ್ಷೇತ್ರದ ಪ್ರಶ್ನಾತೀತ ನಾಯಕನೆಂಬುದರಲ್ಲಿ ಎರಡು ಮಾತಿಲ್ಲ.

ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಕೆಲ ಕಾರಣಗಳಿಂದ ಬಿಜೆಪಿಯಿಂದ ಹೆಬ್ಬಾರ್ ದೂರ ಉಳಿದಿದ್ದಾರೆ. ಬರಲಿರುವ 2028 ರ ಚುನಾವಣೆಯಲ್ಲಿ ಬೇರೆ ಪಕ್ಷದಿಂದ ಸ್ಪರ್ದಿಸಿದರೆ ಪ್ರಬಲ ನಾಯಕ ಹೆಬ್ಬಾರ್ ಎದುರಿಸಲು ಘಟಾನುಘಟಿ ನಾಯಕನೇ ಬೇಕಿದೆ. ಒಂದು ಮೂಲದ ಪ್ರಕಾರ ಚುನಾವಣೆಯಲ್ಲಿ ಹೆಬ್ಬಾರ್ ಎದುರಾಳಿಯಾಗಲು ಬಿಜೆಪಿಯಿಂದ ಮಾಜಿ ಸಂಸದ ಅನಂತಕುಮಾರ ಹೆಗಡೆಯವರಿಂದ ಮಾತ್ರ ಸಾಧ್ಯ ಎಂಬ ಮಾತಿದೆ.

ಆದರೆ ಜನಾಕ್ರೋಶ ಯಾತ್ರೆಯ ವೇದಿಕೆಯಲ್ಲಿ ಹೆಬ್ಬಾರ್‌ರಂತಹ ಪ್ರಬಲ ನಾಯಕರ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆಂಬ ವಿಜಯೇಂದ್ರರ ಮಾತು ಕುತೂಹಲ ಕೆರಳಿಸಿ ಒಗಟಿನಂತಾಗಿದೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಯಲ್ಲಾಪುರ-ಮುಂಡಗೋಡು-ಬನವಾಸಿಗಳಿದ್ದು ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿ ಪಾಳಯದಲ್ಲಿ ಚುನಾವಣೆ ಎದುರಿಸುವ ಸಾಮರ್ಥ್ಯ, ರಾಜಕೀಯ ಚಾಕಚಕ್ಯತೆ, ಒಂದಷ್ಟು ಹಣಕಾಸಿನ ಹಿನ್ನಲೆ , ಜನಾಕರ್ಷಣೆಯ ಮಾತುಗಾರಿಕೆ, ಸಂಘ ಪರಿವಾರದ ಉತ್ತಮ ಬಾಂಧವ್ಯ ಇರಿಸಿಕೊಂಡು ಪಕ್ಷಕ್ಕಾಗಿ ದುಡಿಯುತ್ತಿರುವವರಲ್ಲಿ ಹರಿಪ್ರಕಾಶ ಕೋಣೇಮನೆ ಹೆಸರು ಮುಂಚೂಣಿಯಲ್ಲಿದೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿರುವ ಆ ಸಾಮಾನ್ಯ ಕಾರ್ಯಕರ್ತ ಹರಿಪ್ರಕಾಶ ಕೋಣೆಮನೆಯೇ? ಎಂಬುದು ಬಿಜೆಪಿ ವಲಯದಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಚತುರ, ಪ್ರಬಲ ನಾಯಕ ಅರಬೈಲು ಶಿವರಾಮ ಹೆಬ್ಬಾರ್‌ರನ್ನು ಚುನಾವಣೆಯಲ್ಲಿ ಎದುರಿಸುವುದು ಸುಲಭದ ಮಾತಲ್ಲ. ಇದರ ಅರಿವು ವಿಶೇಷವಾಗಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಬಹಳ ಹತ್ತಿರದಿಂದ ತಿಳಿದಿದೆ. ಕಾರಣ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಹೆಬ್ಬಾರ್ ತ್ಯಾಗ ಮತ್ತು ಶಕ್ತಿ ಏನೆಂಬುದನ್ನು ಬಿ.ವೈ ವಿಜಯೇಂದ್ರ ಅವರಿಗೆ ಚೆನ್ನಾಗಿಯೇ ತಿಳಿದಿದೆ.

ಆದರೂ ಹೆಬ್ಬಾರ್ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಬರಲಿರುವ 2028 ರ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಹೆಬ್ಬಾರ್ ಕಣಕ್ಕಿಳಿದರೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆಂಬ ವಿಜಯೇಂದ್ರರ ಮಾತು ವೇದಿಕೆ ಭಾಷಣಕ್ಕೆ ಸೀಮಿತವೋ ಅಥವಾ ಕೃತಿಯಲ್ಲಿ ಕಾಣಿಸುವುದೋ? ಎಂಬುದು ಯಕ್ಷ ಪ್ರಶ್ನೆಯಾಗಿದೆ.




Prathidvani Yellapura