
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ವಿವಿದೆಡೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ “ಮನೆ ಮನೆಗೆ ಗಂಗೆ” ಎಂಬ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಆದರೆ ದೂರದೃಷ್ಠಿ ಇಲ್ಲದೇ ಮತ್ತು ಯೋಜನೆಯ ಸಾಧಕ ಬಾಧಕಗಳನ್ನು ಅರಿಯದೇ ಕೆಲವೆಡೆ ಯೋಜನೆ ಅನುಷ್ಠಾನಗೊಳಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಮದನೂರು ಪಂಚಾಯತಿ ಮತ್ತು ಕಿರವತ್ತಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಂಗ್ಯಾನತಾವರೆಕೆರೆ, ಹುಣಸಗೇರಿ ಹಾಗು ಅಲ್ಕೇರಿ ಗೌಳಿವಾಡ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಲ ಜೀವನ್ ಮಿಷನ್ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸಮುದಾಯದ ವಂತಿಕೆಯಲ್ಲಿ. ನಿರ್ಮಾಣಗೊಂಡ ಓವರ್‌ಹೆಡ್ ಟ್ಯಾಂಕ್‌ನಲ್ಲಿ ಇಂದಿಗೂ ನೀರು ಶೇಖರಣೆಯಾಗದೇ ಖಾಲಿ ಹೊಡೆಯುತ್ತಿದೆ. ಇದಕ್ಕಾಇ ಕೊರೆಸಿದ ಕೊಳವೆ ಬಾವಿಗಳು ಯಶಸ್ವಿಯಾಗದೇ ನೀರಿನ ಮೂಲವೇ ಇಲ್ಲದಂತಾಗಿ ಜನರಿಗೆ ನೀರಿನ ಅಗತ್ಯತೆ ಪೂರ್ಣಗೊಂಡಿಲ್ಲ.

ಮೊದಲು ನೀರಿನ ಮೂಲ ಹುಡುಕಿಕೊಂಡು ಅದರ ಆಧಾರದಲ್ಲಿ ಓವರ್‌ಹೆಡ್ ಟ್ಯಾಂಕುಗಳನ್ನು ನಿರ್ಮಿಸಬೇಕಿತ್ತೇ ಹೊರತು ಇಲ್ಲದಿರುವ ನೀರಿಗೆ ಟ್ಯಾಂಕ್ ನಿರ್ಮಿಸಿರುವುದು ಯಾವ ಪ್ರಯೋಜನಕ್ಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇದಕ್ಕಾಗಿ ವ್ಯಯಿಸಿದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿರುವುದು ದುರಂತವಾಗಿದೆ. ಕೂಡಲೇ ಇದಕ್ಕೊಂದು ಪರಿಹಾರ ಕಂಡುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಯಾಗಿ ಹೊರಹೊಮ್ಮಿದ “ಮನೆ ಮನೆಗೆ ಗಂಗೆ” ಎಂಬ ಜಲಜೀವನ್ ಮಿಷನ್ ಯೋಜನೆ ಸಾರ್ಥಕಗೊಳಿಸಬೇಕಿದೆ ಎಂದು ಸಂಘಟನೆಯ ಪ್ರಮುಖ ವಿಲ್ಸನ್ ಫರ್ನಾಂಡಿಸ್ ಆಗ್ರಹಿಸಿದ್ದಾರೆ.



Prathidvani Yellapura