
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಮೂರು ವರ್ಷಗಳ ಹಿಂದೆಯೇ ನಡೆಯಬೇಕಿದ್ದ, ತಾ.ಪಂ., ಜಿ.ಪಂ. ಚುನಾವಣೆಗಳು, ಸರಕಾರ ಸಕಾಲದಲ್ಲಿ ಸ್ಥಾನ ಮೀಸಲಾತಿ ನಿಗದಿಪಡಿಸದ ಕಾರಣ ವಿಳಂಬವಾಗಿದ್ದು, ಪ್ರಸಕ್ತ ಮೇ ತಿಂಗಳಲ್ಲಿ ನಡೆಯಲಿರುವುದಾಗಿ ತಿಳಿದಿದೆ. ಇದು ಕೂಡ ಖಚಿತಪಟ್ಟಿಲ್ಲ. ಮೇ ತಿಂಗಳ ಒಳಗಾಗಿ ನೂತನ ಮೀಸಲು ಪಟ್ಟಿಯನ್ನು ಒದಗಿಸುವುದಾಗಿ ಸರಕಾರ ಉಚ್ಛ ನ್ಯಾಯಾಲಯಕ್ಕೆ ಮಾತು ಕೊಟ್ಟಿದೆ. ಈ ಭರವಸೆ ಈಡೇರಿದರೆ, ಅದೇ ತಿಂಗಳಲ್ಲಿ ಚುನಾವಣೆ ನಡೆಸಲು ತಾನೂ ಸಿದ್ದವಿರುವುದಾಗಿ ಚುನಾವಣಾ ಆಯೋಗವೂ ಘೋಷಿಸಿದೆ. ಹೀಗಾಗಿ ಪ್ರಸಕ್ತ ಮೇ ಒಳಗೆ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ಇದೆ. ಅಥವಾ ಮೇ ತಿಂಗಳ ನಂತರ ಮಳೆಗಾಲ ಆರಂಭವಾಗುವುದರಿಂದ, ಈ ಚುನಾವಣೆಯ ಪ್ರಮುಖ ಕಣ ಆಗಿರುವ ಗ್ರಾಮೀಣ ಪ್ರದೇಶದ ಜನರು ಸಹಜವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಲಿದ್ದು, ಮಳೆಗಾಲ ಮುಗಿಯುವವರೆಗೆ ಚುನಾವಣೆ ಅಸಾಧ್ಯ ಎಂದು ಸರಕಾರ ಭಾವಿಸಿದರೆ, ಮತ್ತೇ ನಾವು ಈ ಚುನಾವಣೆ ಕಾಣುವುದು ಮುಂದಿನ ವರ್ಷವೇ!.

ಏನೇ ಇರಲಿ, ಈ ಚುನಾವಣೆಯ ಕುರಿತು ಯಲ್ಲಾಪುರ ತಾಲೂಕಿನ ಮಟ್ಟಿಗೆ ಹೇಳಬೇಕಾದರೆ, ಈ ಹಿಂದೆ ತಾ.ಪಂ.ಗೆ 11 ಹಾಗೂ ಜಿ.ಪಂ.ಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿತ್ತು. ಸಧ್ಯ ಸರಕಾರದ ಹೊಸ ನಿಯಮಾವಳಿಯಂತೆ, ಸ್ಥಾನಗಳ ಒಟ್ಟೂ ಸಂಖ್ಯೆ ಹಾಗೂ ಮೀಸಲಾತಿಯಲ್ಲಿ ಬದಲಾಗಬಹುದೇ ಹೊರತು ಪಕ್ಷಗಳ ನಡುವಿನ ತಿಕ್ಕಾಟದಲ್ಲಿ ಮತದಾರರು ಬದಲಾಗುವುದು ಕಷ್ಟಸಾಧ್ಯವಾಗಿದೆ. ರಾಜ್ಯ ರಾಜಕಾರಣಕ್ಕೂ ಗ್ರಾಮೀಣ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ವಿಶೇಷವಾಗಿ ಯಲ್ಲಾಪುರ ಮುಂಡಗೋಡು ವಿಧಾನಸಭಾ ಕ್ಷೇತ್ರದ ಸದ್ಯದ ಚುನಾವಣಾ ಕಣ ವಿಚಿತ್ರ ತಿರುವು ಪಡೆಯುವಂತಿದೆ. ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ದೃಡ ನಿಲುವನ್ನು ಎಲ್ಲಿಯೂ ಸ್ಪಷ್ಟ ಪಡಿಸುತ್ತಿಲ್ಲ. ಬಹಳಷ್ಟು ಕಡೆಗಳಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಶ್ಲಾಘಿಸುತ್ತಾ ಬಂದಿದ್ದು ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲಿ ಅಂದರೆ ಪಕ್ಷ ಸಂಘಟನೆ, ಆಂತರಿಕ ಸಭೆಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಗೊಂದಲಮಯವಾಗಿದೆ. ಒಂದು ಅರ್ಥದಲ್ಲಿ ಕಾಂಗ್ರೆಸ್ ಕಡೆ ಒಲವು ಹೆಚ್ಚಿದ್ದು ಮುಂದಿನ ವಿಧಾನಸಭಾ ಚುನಾವಣಾ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆಗಳೇ ಹೆಚ್ಚಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಶಾಸಕ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಾಗ ಅವರ ಹಿಂಬಾಲಕರಾಗಿ ಬಂದ ಮಹಾಪಡೆ ಕೊನೆಗೂ ಬಿಜೆಪಿಯೊಂದಿಗೆ ಬೆರೆತಂತೆ ಕಂಡು ಬರಲಿಲ್ಲ. ಗ್ರಾಮೀಣ ಭಾಗದಲ್ಲಿ ಹೆಬ್ಬಾರ್ ಅಭಿಮಾನಿ ಬಳಗವಾಗಿಯೇ ಉಳಿದುಕೊಂಡರು. ಬರಲಿರುವ ಚುನಾವಣೆ ಗ್ರಾಮೀಣ ಭಾಗದ್ದೇ ಆಗಿರುವುದರಿಂದ ಚೆಂಡು ಹೆಬ್ಬಾರ್ ಕೋರ್ಟ್ ನಲ್ಲಿದೆ. ಅವರ ನಿರ್ಧಾರದ ಮೇಲೆ ಚುನಾವಣೆಯ ಕಾವು ತಿಳಿದು ಬರಲಿದೆ. ಆದರೂ ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳನ್ನು ನಂಬಿದ್ದು ಬೇರು ಮಟ್ಟದ ಸಂಘಟನೆಗೆ ಮುಂದಾಗಿದೆ. ಅದಕ್ಕಿಂತ ಒಂದು ಹೆಜ್ಜೆ ಮುಂದೇ ಎಂಬಂತೆ ಗ್ಯಾರಂಟಿ ಯೋಜನೆಗಳನ್ನೇ ನಂಬಿಕೊಂಡು ಕಾಂಗ್ರೆಸ್ ಸಹ ಮೈಕೊಡವಿ ನಿಂತಿದೆ.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಬೂತ್ ಮಟ್ಟದ ಸಂಘಟನೆಗಿಳಿದಿದ್ದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದಾರೆ. ಒಂದಾನುವೇಳೆ ರಾಜ್ಯದಲ್ಲಿ ಚುನಾವಣೆ ಘೋಷಣೆಯಾದರೆ ಕ್ಷೇತ್ರಾದ್ಯಂತ ಕಾಂಗ್ರೆಸ್ ಪಕ್ಷದ ಯುವನಾಯಕನಾಗಿ ವಿವೇಕ್ ಹೆಬ್ಬಾರ್ ಹೊರಹೊಮ್ಮಲಿದ್ದಾರೆ. ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರದಾನವಾಗಬಹುದು ಎಂಬುದು ರಾಜಕೀಯ ವಿಶ್ಲೇಷಕರ ಮಾತಾಗಿದೆ. ಆಗ ಬಿಜೆಪಿಯಿಂದ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವವರಾರು ??? ಎಂಬುದು ಕ್ಷೇತ್ರದ ಜನತೆಯ ಪ್ರಶ್ನೆಯಾಗಿದೆ.

ಯಲ್ಲಾಪುರ ತಾಲೂಕು ಕಳೆದ ಅನೇಕ ವರ್ಷಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿದೆ. ಈ ಹಿಂದೆ ನಡೆದ ಚುನಾವಣೆಗಳಲ್ಲೂ ಬಹುತೇಕ ತಾ.ಪಂ., ಜಿ.ಪಂ. ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ತಾಲೂಕಿನಲ್ಲಿ ಆಡಳಿತವನ್ನೂ ನಡೆಸಿದೆ. ಈಗಲೂ ಫಲಿತಾಂಶ ಭಿನ್ನವಾಗಲಾರದು. ಆದರೆ ಇದಕ್ಕಾಗಿ, ಈ ತಾಲೂಕಿನಲ್ಲಿ ಬಿಜೆಪಿಯಿಂದಲೇ ಆಯ್ಕೆಯಾಗಿ ಅಧಿಕಾರ ಅನುಭವಿಸುತ್ತಿರುವ ಇಲ್ಲಿನ ಒP, ಒಐಂ, ಒಐಅ ಈ ಮೂರೂ ತ್ರಿಮೂರ್ತಿಗಳು ತಮ್ಮ ತಮ್ಮ ಒಣ ಪ್ರತಿಷ್ಠೆಗಳನ್ನು ಬದಿಗಿಟ್ಟು, ಸಂಘಟನೆಯ ಮೂಲ ಸೆಲೆಯಲ್ಲಿ ಒಂದಾಗುವ ಅವಶ್ಯಕತೆ ಇದೆ. ಇದರಿಂದ ತಾಲೂಕಿನಲ್ಲಿ ಕಾರ್ಯಕರ್ತರ ಶಕ್ತಿಯೂ ಇಮ್ಮಡಿಸುತ್ತದೆ. ಇಷ್ಟಾದರೆ ಸಾಕು. ಯಲ್ಲಾಪುರ ತಾಲೂಕಿನಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಇದು ಸಾಧ್ಯವೇ?. – ರಾಮು ನಾಯ್ಕ, ಬಿಜೆಪಿ ಹಿರಿಯ ನಾಯಕ

ಪ್ರಸಕ್ತ ಸಂದರ್ಭದಲ್ಲಿ ಚುನಾವಣೆಯಾದರೆ ತಾಲೂಕಿನಲ್ಲಿ ನೂರಕ್ಕೆ ತೊಂಬತ್ತರಷ್ಟು ಸ್ಥಾನ ನಮ್ಮ ಕಾಂಗ್ರೆಸ್ ಮಡಿಲಿಗೆ ಸೇರುವದು ನಿಶ್ಚಿತ ನಮ್ಮ ಗ್ಯಾರೆಂಟಿ ಯೋಜನೆಗಳು ಜನರ ಮನಸ್ಸನ್ನು ಗೆದ್ದಿದೆ ಈ ಯೋಜನೆಯಿಂದ ಬಡವರು ಮತ್ತೂ ಮಧ್ಯಮ ವರ್ಗದವರು ನೆಮ್ಮದಿ ಜೀವನ ನಡೆಸುವಂತಾಗಿದೆ ಅಲ್ಲದೇ ಕಾಂಗ್ರೆಸ್ ನುಡಿದಂತೆ ನಡೆಯುವದು ಜನರಿಗೆ ವಿಶ್ವಾಸ ಹುಟ್ಟಿಸಿದೆ ಅಲ್ಲದೇ ಮೋದಿಯವರ ಬಗ್ಗೆ ಅಷ್ಟೊಂದು ಅಭಿಮಾನ ಇಲ್ಲದಂತಾಗಿದೆ ಸಿದ್ದರಾಮಯ್ಯ ನವರ ಈ ಸಾರಿಯ ಬಜೆಟ್ ಎಲ್ಲ ವರ್ಗದವರನ್ನೂ ತಲುಪಿ ವಿರೋಧಿಗಳ ಬಾಯನ್ನು ಮುಚ್ಚಿಸುವಂತೆ ಮಾಡಿದೆ ಮತ್ತೂ ಸ್ಥಳೀಯ ಚುನಾವಣೆಗಳಲ್ಲಿ ಮತದಾರರು ತಮ್ಮ ಬದುಕು ಮತ್ತೂ ಅಭಿವೃದ್ಧಿ ನೋಡುವದರಿಂದ ಬಹುತೇಕ ಎಲ್ಲಾ ಸದಸ್ಯರ ಕ್ಷೇತ್ರಗಳೂ ಕಾಂಗ್ರೆಸ್ ಮಡಿಲಿಗೆ ಸೇರುವದು ನಿಶ್ಚಿತ – ಡಿ ಎನ್ ಗಾಂವ್ಕಾರ್ , ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ
Prathidvani Yellapura