



ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಳಸೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಭ್ರಮ ಶನಿವಾರವನ್ನು ಕೃಷಿ ಕಾಯಕದಲ್ಲಿ ತೊಡಗಿ ರೈತರ ಶ್ರಮದ ಮಹತ್ವವನ್ನು ಅರಿತರು.

ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಒಂದಾದ ಸಂಭ್ರಮ ಶನಿವಾರದಲ್ಲಿ ವಿವಿಧ ಕಾರ್ಯ ಚಟುವಟಿಕೆಗಳನ್ನು (ಪಠ್ಯೇತರ) ವಿದ್ಯಾರ್ಥಿಗಳು ಅರಿತುಕೊಳ್ಳುವುದು, ತೊಡಗಿಕೊಳ್ಳುವುದು ಇದರ ಉದ್ದೇಶವಾಗಿದೆ. ಆ ಹಿನ್ನಲೆಯಲ್ಲಿ ಕಳಸೂರು ಶಾಲೆಯ 1 ರಿಂದ 5 ನೇ ತರಗತಿವರೆಗಿನ 40 ವಿದ್ಯಾರ್ಥಿಗಳು ಮುಖ್ಯ ಶಿಕ್ಷಕ ಶ್ರೀಧರ ದೇವಾಡಿಗ ನೇತೃತ್ವದಲ್ಲಿ ಶಾಲೆಯ ಸಮೀಪದಲ್ಲೆ ಇರುವ ಶಿರನಾಳಕರ್ ಎಂಬುವರ ಕೃಷಿ ಜಮೀನಿನಲ್ಲಿ ಭತ್ತದ ಪೈರಿನ ನಾಟಿ ಕಾರ್ಯ ಮಾಡಿ ಅನ್ನದ ಮಹತ್ವವನ್ನು ಅರಿತುಕೊಂಡರು.

ದೇಶಕ್ಕೆ ಅನ್ನ ನೀಡುವ ರೈತ ಬೆಳೆಯುವ ಬೆಳೆಯ ಹಿಂದಿನ ಶ್ರಮ ಏನೆಂಬುದನ್ನು ಅರಿತುಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಸಂಭ್ರಮ ಶನಿವಾರ ಸಹಕಾರಿಯಾಯಿತು. 1 ಗಂಟೆಗೂ ಹೆಚ್ಚು ಕಾಲ ಕೆಸರು ಮಣ್ಣಿನೊಂದಿಗೆ ಬಾಂಧವ್ಯ ಬೆಸೆದುಕೊಂಡು ಹಸಿರು ಪೈರಿನ ಮುಡಿ ಹಿಡಿದು ನಾಟಿ ಕಾರ್ಯ ಮಾಡುತ್ತಿದ್ದರೆ ನೋಡುವುದು ಒಂದು ಸುಂದರ ಚಿತ್ರಣವಾಗಿತ್ತು. ಮಕ್ಕಳಿಗೆ ಮದ್ಯಾಹ್ನಕ್ಕೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಶಾಲೆಯೊಳಗೆ ಕುಳಿತು ಪಾಠ ಮಾಡುವ ಸಂದರ್ಭದಲ್ಲಿ ಅಕ್ಕಿಯ ವಿಚಾರ ಬಂದಾಗ ವಿದ್ಯಾರ್ಥಿಗಳಿಗೆ ಅಕ್ಕಿ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ರೇಷನ್ ಅಂಗಡಿಯಿಂದ ಎಂಬ ವಿದ್ಯಾರ್ಥಿಗಳ ಉತ್ತರವೇ ಈ ಚಟುವಟಿಕೆಗೆ ಕಾರಣವಾಯಿತು. ನಾವು ನಿತ್ಯ ತಿನ್ನುವ ಅನ್ನ ತಯಾರಾಗಲು ಒಬ್ಬ ರೈತನ ನೂರಾರು ದಿನದ ಶ್ರಮದ ಫಲವಾಗಿರುತ್ತದೆ. ಆ ಚಟುವಟಿಕೆಯ ಪ್ರಕ್ರಿಯೆ ಮಕ್ಕಳಿಗೆ ತಿಳಿದಾಗ ಅನ್ನದ ಮಹತ್ವ , ರೈತರ ಶ್ರಮ ಅರಿವಿಗೆ ಬರಲಿದೆ. ಭವಿಷ್ಯದ ಪೀಳಿಗೆಗೆ ಕೃಷಿ ಮೇಲಿನ ಭಕ್ತಿ ಹೆಚ್ಚಲಿದೆ. – ಹರೀಶ್ ನಾಯ್ಕ, ಶಿಕ್ಷಕ, ಕಳಸೂರು ಕಿ.ಪ್ರಾ.ಶಾಲೆ]

Prathidvani Yellapura