Breaking News

ಅಜಾತಶತ್ರು ಪಕ್ಷಾತೀತ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಬತ್ತಳಿಕೆಯಲ್ಲಿ ಅಭಿವೃದ್ಧಿ ಬಾಣಗಳು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.

ಪ್ರತಿಧ್ವನಿ,ಯಲ್ಲಾಪುರ : ಸತತ ನಾಲ್ಕು ಬಾರಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಯಾವುದೇ ಪಕ್ಷದಲ್ಲಿದ್ದರೂ ಜನರ ಅಭಿಮಾನ ಗಳಿಸಿ ಪಕ್ಷಾತೀತವಾದ ಬೆಂಬಲ ಪಡೆದು ಅಜಾತಶತ್ರು ಎನಿಸಿಕೊಂಡಿರುವ ಶಿವರಾಮ ಹೆಬ್ಬಾರ್ ಈ ಬಾರಿ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಬೇಕಿದೆ. ವಿಶೇಷವೆಂದರೆ ಮೂರು ಬಾರಿ ಗೆದ್ದಾಗಲೂ ಆಡಳಿತ ಪಕ್ಷದಲ್ಲಿದ್ದರು. ಒಮ್ಮೆ ಸಚಿವರೂ ಆಗಿದ್ದರು. ಆದರೆ ನಾಲ್ಕನೇ ಬಾರಿ ಗೆದ್ದರೂ ಆಡಳಿತ ಪಕ್ಷದಲ್ಲಿಲ್ಲ. ಆದರೂ ವರ್ಚಸ್ಸು ಕಡಿಮೆಯಾಗಿಲ್ಲ.
ಉತ್ತರಕನ್ನಡ ಜಿಲ್ಲಾ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿದ್ದ ಕಾಲದಿಂದಲೂ ಹೆಬ್ಬಾರ್ ಜನಸಾಮಾನ್ಯರೊಡನೆ ಬೆರೆತು ರಾಜಕೀಯ ಏಳಿಗೆಗೆ ಒಂದೊದೇ ಮೆಟ್ಟಿಲನ್ನು ಜೋಡಿಸುತ್ತಾ ಬಂದವರು. ಅವರು ನಡೆದ ಪಥದಲ್ಲಿ ರಾಜಕೀಯ ವಿಪ್ಲವಗಳಿಂದ ಪಕ್ಷ ಬದಲಿಸಿ ಚುನಾವಣೆಗೆ ಸ್ಪರ್ಧಿಸಿದರೂ ಗೆಲುವು ಇವರ ಬೆನ್ನತ್ತಿದೆ ಎಂದರೆ ಅದಕ್ಕೆ ಸರಳತೆ ಮತ್ತು ಹಿಡಿದ ಪಟ್ಟು ಬಿಡದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದೇ ಆಗಿದೆ.


ಯಲ್ಲಾಪುರ ವಿಧಾನಸಭಾ ಕ್ಷೆತ್ರ ಎರಡು ತಾಲೂಕು ಒಂದು ಹೋಬಳಿಯನ್ನು ಒಳಗೊಂಡಿದ್ದು 41 ಪಂಚಾಯತಗಳು ಕ್ಷೇತ್ರವ್ಯಾಪ್ತಿಯಲ್ಲಿದೆ. ಯಲ್ಲಾಪುರ ಅಪ್ಪಟ ಕೃಷಿ ಪ್ರಧಾನ ಕ್ಷೇತ್ರ, ಮುಂಡಗೋಡು ಕೃಷಿ ಮತ್ತು ಉದ್ಯಮಗಳು ಕಣ್ತೆರೆಯುತ್ತಿರುವ ಕ್ಷೇತ್ರ , ಬನವಾಸಿ ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿರುವ ಕ್ಷೇತ್ರವಾಗಿದೆ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾರ್ ಗೆಲುವಿನ ಹಿಂದೆ ಮುಂಡಗೋಡಿನ ಬಲವಿತ್ತು. ಈ ಬಾರಿಯ ಗೆಲುವಿನ ಹಿಂದೆ ಯಲ್ಲಾಪುರ, ಬನವಾಸಿಯ ಬಲವಿದೆ. ಗೆಲುವಿನ ಅಂತರ ಕಡಿಮೆಯಾದರೂ ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಾದರೂ ಹೆಬ್ಬಾರ್ ಗೆಲ್ಲಬಲ್ಲರು ಎಂಬುದಕ್ಕೆ ಕಾಂಗ್ರೆಸ್ ಸುನಾಮಿಯ ನಡುವೆ ಈ ಬಾರಿಯ ಗೆಲುವು ಉತ್ತರವಾಗಿದೆ.


ಹೆಬ್ಬಾರ್ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಮುಂದುವರೆಯುವಾಗಲೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಿಯಾದವರಲ್ಲ. ಪಟ್ಟು ಹಿಡಿದು ವಿವಿಧ ಇಲಾಖೆಯ ಸಚಿವರ ಬಳಿ ಹೆಚ್ಚಿನ ಅನುದಾನ ತರುವಲ್ಲಿ ಹೆಬ್ಬಾರ್ ಯಶಸ್ವಿಯಾಗಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಮುನ್ನುಡಿ ಬರೆದು ತಾವೂ ಸಚಿವರಾಗಿ ಕಾರ್ಮಿಕ ಖಾತೆ ನಿಭಾಯಿಸಿ ದೇಶಕ್ಕೇ ಮಾದರಿಯಾದರು.

ಈ ಅವಧಿಯಲ್ಲಿ ಸಾವಿರಾರು ಕೋಟಿ ಕ್ಷೇತ್ರದ ಅಭಿವೃದ್ಧಿಗಾಗಿ ಭರಪೂರ ಯೋಜನೆಗಳನ್ನು ತಂದರು. ಪ್ರಮುಖವಾಗಿ ಮುಂಡಗೋಡು, ಬನವಾಸಿ ಹಾಗೂ ಯಲ್ಲಾಪುರದ ಕೆರೆಗಳಿಗೆ ನೀರು ತುಂಬಿಸುವುದು, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಆಸ್ಪತ್ರೆಗಳ ಉನ್ನತೀಕರಣ, ಗ್ರಾಮೀಣ ರಸ್ತೆಗಳ ನಿರ್ಮಾಣ, ವ್ಯವಸ್ಥಿತ ಬಸ್ ನಿಲ್ದಾಣ, ಸೂರಿಲ್ಲದವರಿಗೆ ಸ್ವಂತ ಸೂರು, ವಾಸಿಸುತ್ತಿರುವ ಭೂಮಿಗೆ ಹಕ್ಕುಪತ್ರ ಹತ್ತು ಹಲವು ಯೋಜನೆಗಳಿಗೆ ಕಾರಣೀಭೂತರಾದರು. ಇದೀಗ ವಿರೋಧ ಪಕ್ಷವಾಗಿ ಬಿಜೆಪಿ ವಿಧಾನಸಭೆಯಲ್ಲಿ ಕುಳಿತುಕೊಳ್ಳಬೇಕಿದೆ. ಅದರಲ್ಲಿನ ಶಾಸಕರಾಗಿ ಆಡಳಿತ ಪಕ್ಷದ ಗಮನ ಸೆಳೆದು ಸಚಿವರ ಮನವೊಲಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರಕ್ಕೆ ತರುವ ಹೊಣೆ ಹೆಬ್ಬಾರ್ ಹೆಗಲ ಮೇಲಿದೆ. ಅದನ್ನು ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕಿದೆ.


ಕ್ಷೇತ್ರದಲ್ಲಿ ಆಗಬೇಕಿರುವ ಭರವಸೆಗಳ ಕಾಮಗಾರಿಗಳು ಬಹುತೇಕ ಹೆಬ್ಬಾರ್ ಪೂರ್ಣಗೊಳಿಸಿದ್ದಾರೆ. ಕೆಲವು ಯೋಜನೆಗಳು ಅಂತಿಮ ಹಂತದ ಪ್ರಗತಿಯಲ್ಲಿದೆ. ಹಾಗೆಂದು ಅಭಿವೃದ್ಧಿ ನಿಂತ ನೀರಲ್ಲ. ನಿರಂತರ ಹರಿಯುವ ನದಿ. ಈ ವಿಚಾರದಲ್ಲಿ ಒಂದಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಯಲ್ಲಾಪುರ ತಾಲೂಕಿಗೆ ಆಗಬೇಕಿದೆ.


• ಯಲ್ಲಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 100 ಕ್ಕೂ ಅಧಿಕ ಕೋಟಿಯಲ್ಲಿ ಬೊಮ್ಮನಹಳ್ಳಿ ಡ್ಯಾಂನಿಂದ ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆ ಪ್ರಾರಂಭವಾಗಬೇಕಿದ್ದು ಪಟ್ಟಣದ ಜನತೆ ಬಹುನಿರೀಕ್ಷೆಯಲ್ಲಿದ್ದಾರೆ.


• ತಾಲೂಕಿನ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ಹೆಚ್ಚಿದ್ದು ಅಗತ್ಯತೆಗೆ ಅನುಗುಣವಾಗಿ ತಾಲೂಕು ಕ್ರೀಡಾಂಗಣವನ್ನು ಉನ್ನತೀಕರಣಗೊಳಿಸುವ ಯೋಜನೆಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಹೆಬ್ಬಾರ್ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡಿದ್ದು ಅಚಿತಿ ಘಟ್ಟದಲ್ಲಿತ್ತು. ಅದನ್ನು ಪೂರ್ಣಗೊಳಿಸಿ ವ್ಯವಸ್ಥಿತ ತಾಲೂಕು ಕ್ರೀಡಾಂಗಣಕ್ಕೆ ಭದ್ರ ಬುನಾದಿ ಹಾಕಬೇಕಿದೆ.


• ಪಟ್ಟಣದಲ್ಲಿ ಹಾದುಹೋಗಿರುವ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯಿಂದ ಸಮಸ್ಯೆಗಳ ಸರಮಾಲೆಯೇ ಉದ್ಭವವಾಗುತ್ತಿದ್ದು ಬೈಪಾಸ್ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿ ಸಕಾಋದ ಮಟ್ಟದಲ್ಲಿ ಕಾರ್ಯಸಾಧುವಾಗಿಸಬೇಕಿದೆ.


• ಪಟ್ಟಣದಲ್ಲಿನ ಸುಂದರ ಜೋಡುಕೆರೆ ಪರಿಸರವನ್ನು ಪ್ರವಾಸಿ ಸನೇಹಿ ಸ್ಥಳವಾಗಿಸುವಲ್ಲಿ ಪ್ರಯತ್ನ ಸಾಗಿದ್ದು ಕೆರೆಯ ಸುತ್ತ ವಾಕಿಂಗ್ ಪಾತ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇನ್ನೂ ಹೆಚ್ಚಿನ ಅನುದಾನ ತಂದು ಪ್ರೇಕ್ಷಣೀಯ ಸ್ಥಳವಾಗಿಸಬೇಕಿದೆ.


ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಸಲುವಾಗಿ ರಬ್ಬರ್ ಫ್ಯಾಕ್ಟರಿ, ಗಾಮೆಂಟ್ಸ್, ಬಿಡಿ ಭಾಗಗಳ ತಯಾರಿಕಾ ಗಟಕ, ಇನ್ನಾವುದಾದರೂ ವ್ಯವಸ್ಥೆಗೆ ಸಂಬಂಧಿಸಿದ ಉದ್ಯಮ ಸ್ಥಾಪನೆಯಾಗಬೇಕಿದೆ.


ಸಾತೊಡ್ಡಿ ಜಲಪಾತ ಸೇರಿದಂತೆ ತಾಲೂಕಿನ ವಿವಿಧ ಜಲಪಾತಗಳ ಪರಿಸರವನ್ನು ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಠಿಕೋನದಿಂದ ಮೂಲಭೂತ ಸೌಕರ್ಯ ಒದಗಿಸಿ ವಿಶ್ವವಿಖ್ಯಾತ ಪ್ರೇಕ್ಷಣೀಯ ಸ್ಥಳಗಳನ್ನಾಗಿಸುವಲ್ಲಿ ಪರಯತ್ನ ಸಾಗಬೇಕಿದೆ.

ಇನ್ನುಳಿದಂತೆ ಮುಂಡಗೋಡು ಮತ್ತು ಬನವಾಸಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ವೇಗ ಪಡೆಯಬೇಕಿದೆ. ಬನವಾಸಿಯಲ್ಲಿ ಎರಡನೇ ಹಂತದ ನೀರಾವರಿ ಯೋಜನೆ ಚಾಲನೆಯಲ್ಲಿದೆ. ಕೋಲ್ಡ್ ಸ್ಟೋರೇಜ್ ಸ್ಥಾಪನೆ ಕಾರ್ಯ ಸಾಗುತ್ತಿದ್ದು ಬನವಾಸಿ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ಮತ್ತಷ್ಟು ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ.


ಯಲ್ಲಾಪುರ ಕೃಷಿ ಪ್ರಧಾನ ತಾಲೂಕು. ಅದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಹಸ್ರಾರು ಕುಟುಂಬವಿದ್ದು ಪರಿಸರದಲ್ಲಾಗುವ ವ್ಯತ್ಯಾಸಗಳಿಗೆ ಕೃಷಿಯಲ್ಲಿ ಹೊಡೆತ ತಿಂದಾಗ ತಾಲೂಕಿನ ಆರ್ಥಿಕ ವಹಿವಾಟೇ ಕುಸಿಯುತ್ತದೆ. ಈ ಹಿನ್ನಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿರುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ತಂದು ಉದ್ಯೋಗ ಸೃಷ್ಟಿಸಿ ಆರ್ಥಿಕ ಉನ್ನತಿಗೆ ಪ್ರಯತ್ನ ಮಾಡಬಹುದಾಗಿದೆ. ಪರಿಸರಕ್ಕೆ ಮಾರಕವಲ್ಲದ ಉದ್ಯಮಗಳನ್ನು ತಂದರೆ ಸಹಕಾರಿಯಾಗಲಿದೆ. ಈ ಎಲ್ಲಾ ಪ್ರಯತ್ನಗಳಿಗೆ ಆಡಳಿತ ಪಕ್ಷದ ಪರವಾಗಿ ಶಾಸಕರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ.- ಡಿ.ಎನ್ ಗಾಂವ್ಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ


ಬಸ್‌ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ, ಅಗ್ನಿ ಶಾಮಕ ಠಾಣೆ, ಪ.ಪಂ ಕಾರ್ಯಾಲಯ, ನೂತನ ತಹಸೀಲ್ದಾರ ಕಚೇರಿ, ಕಾರ್ಮಿಕ ಭವನ, ಸಮಾಜ ಕಲ್ಯಾಣ ಇಲಾಖೆ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಕಾಲೇಜುಗಳಿಗೆ ಹೆಚ್ಚುವರಿ ಕೊಠಡಿಗಳು, ಸೂರಿಲ್ಲದವರಿಗೆ ಸ್ವಂತ ಸೂರು, ತಾವು ವಾಸಿಸುವ ಜಾಗಗಳಿಗೆ ಹಕ್ಕುಪತ್ರ, ಪಟ್ಟಣದಾದ್ಯಂತ ಸಿಸಿ ರಸ್ತೆ, ಸುಂದರ ನಗರದ ನಿರ್ಮಾಣಕ್ಕೆ ಉನ್ನತ ಮಟ್ಟದ ಬೆಳಕಿನ ವ್ಯವಸ್ಥೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿದ್ದು ದುಡಿಯುವ ಕೈಗಳಿಗೆ ಕೆಲಸಕ್ಕಾಗಿ ಉದ್ಯಮವೊಂದು ತರಬೇಕಿದೆ. – ಸುನಂದಾದಾಸ್, ಪ.ಪಂ ಮಾಜಿ ಅಧ್ಯಕ್ಷರು]

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *