
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ- ಪ್ರಣಾಳಿಕೆ ಎಂದರೆ ಒಂದು ಪಕ್ಷದ ಆತ್ಮವಿದ್ದಂತೆ ಆ ಪಕ್ಷದ ಅಸ್ಮಿತೆ ಅದರಂತೆ ರಾಜ್ಯದಲ್ಲಿರುವ ಪ್ರಮುಖ ಮೂರು ಪಕ್ಷಗಳು ಚುನಾವಣಾ ಸಮಯದಲ್ಲಿ ಅಧಿಕಾರ ಲಭಿಸಿದರೆ ತಾವೇನು ಮಾಡುತ್ತೇವೆ ಎಂಬುದನ್ನು ಪ್ರಣಾಳಿಕೆ ಮೂಲಕ ಜನರ ಮುಂದೆ ತಮ್ಮ ಪಕ್ಷದ ಉದ್ದೇಶ ತೆರೆದಿಡುತ್ತಾರೆ. ಅದನ್ನು ನೋಡಿದ ಜನರು ತೀರ್ಮಾನಿಸಿ ಮತಚಲಾಯಿಸುತ್ತಾರೆ ಹಾಗೆಂದು ಚುನಾವಣೆ ಗೆಲುವಿಗೆ ಪ್ರಣಾಳಿಕೆ ಮಾನದಂಡವೇ ? ಎಂದು ಪ್ರಶ್ನಿಸಿದರೆ ಅಲ್ಲ ಅದುಕೂಡ ಗೆಲುವಿನ ಪೂರಕ ಅಂಶಗಳಲ್ಲಿ ಒಂದಾಗುತ್ತದೆ ಅಷ್ಟೇ. ಅದರಲ್ಲಿ ಪ್ರತ್ಯೇಕವಾಗಿ ಯಲ್ಲಾಪುರ ತಾಲೂಕಿನ ಅಭಿವೃದ್ಧಿಗೆಂದೆ ಒಂದಷ್ಡು ಅಂಶಗಳನ್ನ ಅಳವಡಿಸಬೇಕಿತ್ತು.

ಸದ್ಯ ಸಮಯ ಮೀರಿದೆ ಚುನಾವಣೆ ಮುಗಿದಿದೆ ನಾಳೆ ಪಲಿತಾಂಶ ಹೊರಬೀಳಲಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಯಾರಾಗುತ್ತಾರೆ??? ರಾಜ್ಯದ ಚುಕ್ಕಾಣಿ ಯಾವ ಪಕ್ಷದ ಪಾಲಾಗಲಿದೆ ಕಾದು ನೋಡಬೇಕಿದೆ. ಆದರೆ ಯಾವುದೆ ಪಕ್ಷ ಅಧಿಕಾರಕ್ಕೆ ಬಂದರು ಯಲ್ಲಾಪುರ ತಾಲೂಕಿನ ಅಭಿವೃದ್ಧಿ ಗೆಂದು ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕೆಂಬುದು ವಾಸ್ತವಿಕ ಸತ್ಯ ಮತ್ತು ಜನರ ನಾಡಿಮಿಡಿತ.

ಅತ್ತ ಕರಾವಳಿಯಲ್ಲ ಇತ್ತ ಉತ್ತರ ಕರ್ನಾಟಕವಲ್ಲ ಸಂಪೂರ್ಣ ಮಲೆನಾಡು ಅಲ್ಲ ಬಯಲು ಸೀಮೆ ಅಲ್ಲ ಅಂದಮೇಲೆ ಯಲ್ಲಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದು ಸಹ ಉತ್ತಮ ಯೋಜನೆ ಎನಿಸಲಿದೆ.

ಕರ್ನಾಟಕದಲ್ಲಿ ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ,ಕರಾವಳಿ ಪ್ರದೇಶಗಳೆಂಬ ವಿಭಾಗಗಳಿವೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಎಂದೆಲ್ಲಾ ಪ್ರದೇಶಗಳಾಗಿ ಬಿಂಬಿಸಲಾಗುತ್ತದೆ ಈ ಎಲ್ಲಾ ವಿಭಾಗಗಳಾಗಲಿ ಪ್ರದೇಶಗಳಾಗಲಿ ಹೋಲಿಕೆಯೆ ಆಗದ ಆ ಹೆಸರುಗಳನ್ನು ಗಟ್ಟಿಯಾಗಿಸಿಕೊಳ್ಳದ ಪ್ರದೇಶವೆಂದರೆ ಅದು ನಮ್ಮ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು.

ಅತ್ತ ಕರಾವಳಿಯಲ್ಲ, ಇತ್ತ ಉತ್ತರ ಕರ್ನಾಟಕ ವಲ್ಲ ಯಲ್ಲಾಪುರವನ್ನು ಯಾವುದಾದರು ಭಾಗಕ್ಕೆ ಸೇರಿಸಿ ಇಲ್ಲವಾದರೆ ಇದಕ್ಕಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಣೆಮಾಡಿ ಎಂಬುದು ಕಳಕಳಿ ಯಾಗಿದೆ.

ಅನೇಕ ದಶಕಗಳ ನಂತರ ಅಭಿವೃದ್ಧಿ ವಿಚಾರದಲ್ಲಿ ಕೊಂಚ ವೇಗ ಪಡೆದಿದೆ ಅದಕ್ಕೆ ಈ ಭಾಗವನ್ನು ಪ್ರತಿನಿಧಿಸುವ ಜನ ನಾಯಕರಾದವರ ಹಿಚ್ಚಾಶಕ್ತಿ ಮತ್ತು ದೂರದೃಷ್ಟಿ ಕಾರಣವಾಗಿದೆ. ಅಭಿವೃದ್ಧಿಯ ಪರ್ವ ಕಂಡಿದೆ. ಆದರೂ ಆಗಬೇಕಾದ ಕಾರ್ಯ ಬೆಟ್ಟದಷ್ಟಿದೆ ಈ ಎಲ್ಲಾ ಕಾರಣಕ್ಕಾಗಿಯೇ ನಮ್ಮ ಯಲ್ಲಾಪುರ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳು ಪ್ರತ್ಯೇಕ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕಿದೆ.

ಕೆಲವರಿಗೆ ಇದು ಹಾಸ್ಯ ವೆನಿಸಿದರು ವಿಮರ್ಶಿಸಿ ಪರಾಮರ್ಶಿಸಿ ನೋಡಿ
ಶೈಕ್ಷಣಿಕ ಕ್ಷೇತ್ರ…
ಇಲ್ಲಿನ ಮಕ್ಕಳ ಬುದ್ದಿಮತ್ತೆ ಉತ್ತಮ ಗುಣಮಟ್ಟದ್ದಾಗಿದ್ದು ಶಿಕ್ಷಣದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಆದರೆ ಮುಂದುವರಿದ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲವಾಗಿದೆ. ಅದಕ್ಕೇನಿದ್ದರು ಹುಬ್ಬಳ್ಳಿ ಧಾರವಾಡ ಆಶ್ರಯಿಸಬೇಕಿದೆ. ಈ ಪರಿಸ್ಥಿತಿ ಹೋಗಲಾಡಿಸಿ ಒಂದು ಉತ್ತಮ ಇಂಜನಿಯರಿಂಗ್ ಅಥವ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕಿದೆ.

ಅಡಿಕೆ ಹೆಚ್ಚಾಗಿ ಬೆಳೆಯುತ್ತಿದ್ದು ಕೃಷಿ ತಂತ್ರಜ್ಞಾನ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಬೇಕಿದೆ. ಇಲ್ಲಿನ ಶಿಲ್ಪ ಕೆತ್ತನೆ ಮರದ ಕೆತ್ತನೆ ದೇಶ ವಿದೇಶಗಳಲ್ಲಿ ಹೆಸರಾಗಿದ್ದು ಮುಂದಿನ ಪೀಳಿಗೆಯು ಸಹ ಈ ಕಲೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಮತ್ತು ಇನ್ನಿತರ ಕಲೆಗಳಾದ ಸಂಗೀತ, ನಾಟ್ಯ,ನಾಟಕ ಕರಕುಶಲ ಕಲೆಗಳನೆಲ್ಲಾ ಅಭ್ಯಸಿಸುವ ಆಟ್೯ ಕಾಲೇಜು ಸ್ಥಾಪಿಸಬಹುದಾಗಿದೆ.

ಇದರಿಂದ ಕೇವಲ ಸರ್ಕಾರಿ ಉದ್ಯೋಗಕ್ಕಾಗಿಯೆ ಅಲ್ಲದೆ ಯುವ ಜನಾಂಗ ತಮ್ಮ ಕಾಲಮೇಲೆ ತಾವುನಿಂತು ಜೀವನ ನಿರ್ವಣೆಗಾಗಿ ತಮ್ಮದೆ ವೃತ್ತಿಯನ್ನು ಅವಲಂಭಿಸಲಿದ್ದಾರೆ. ಇದರಿಂದ ನಿರುದ್ಯೋಗ ಸಮಸ್ಯೆ ಅಲ್ಪ ಪ್ರಮಾಣದಲ್ಲಾದರು ಕಡಿಮೆಯಾಗಲಿದೆ.

ಸೋಂದಾ ಸ್ವರ್ಣವಲ್ಲಿ ಶ್ರೀಗಳ ಸತತ ಪ್ರಯತ್ನದ ಫಲವಾಗಿ ಭಗವದ್ಗೀತೆ ಅಭಿಯಾನ ಯಶಸ್ವಿಯಾಗಿದ್ದು ಭಗವದ್ಗೀತೆ ಅಧ್ಯಯನ ಮತ್ತು ಸಂಶೋಧನೆಗೆ ಸಂಬಂಧಿಸಿದ ಕಾಲೇಜೊಂದನ್ನು ಯಲ್ಲಾಪುರದಲ್ಲಿ ತೆರೆಯಬಹುದಾಗಿದೆ. (ಕೇರಳದ ಮಾನಂದವಾಡಿಯಲ್ಲಿ ಬೈಬಲ್ ಕಾಲೇಜ್ ಇದ್ದಂತೆ)

ಇನ್ನೂ ಶಿಕ್ಷಣ ತಜ್ಞರ ಸಲಹೆ ಆಭಿಪ್ರಾಯ ಪಡೆದು ಇನ್ನೂ ಹೆಚ್ಚಿನ ಯೋಜನೆ ರೂಪಿಸಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಬಹುದಾಗಿದೆ.

ಉದ್ಯಮ/ಉದ್ಯೋಗ
ವಯಸ್ಸಾದ ತಂದೆ ತಾಯಿಗಳನ್ನು ತೋಟ ಗದ್ದೆ ನೋಡಿಕೊಂಡು ಇರುವಂತೆ ತಾವೆಲ್ಲ ಪಟ್ಟಣಕ್ಕೆ ಸೀಮಿತರಾಗಿ ಹಬ್ಬಹರಿದಿನಗಳಲ್ಲಿ ಹಳ್ಳಿಯ ಕಡೆಗೆ ಮುಖಮಾಡಿ ರಜಾದಿನಗಳನ್ನು ಮಜಾದಿನಗಳಾಗಿ ಕಳೆದು ಮರಳಿ ಪಟ್ಟಣಕ್ಕೆ ಮರಳುವ ಯುವಜನಾಂಗದ ಮನಸ್ಥಿತಿಯಿಂದಾಗಿ ಹಳ್ಳಿಗಳೆಲ್ಲಾ ವೃದ್ದಾಶ್ರಮವಾಗಿ ಮಾರ್ಪಟ್ಟಿವೆ.

ಹಾಗುಹೀಗು ಇರುವ ಅಲ್ಪ ಸ್ವಲ್ಪ ಜನರಿಗಾದರು ಏನಾದರು ಅಭಿವೃದ್ಧಿ ಮಾಡಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ನೂತನ ಯೋಜನೆಗಳ ಅನುಷ್ಟಾನಕ್ಕೆ ಮುಂದಾದರೆ ಸಾಕು ನಮ್ಮ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ ಎಂಬ ಆಸೆ ಹೊತ್ತವರ ಕನಸಿಗೆ ಪರಿಸರ ವಾದಿಗಳು ತಣ್ಣೀರೆರಚಿ ವಿಕೃತ ಆನಂದ ಹೊಂದುತ್ತಿದ್ದಾರೆ.

ಇಷ್ಟೆಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಭವಿಷ್ಯದ ಪೀಳಿಗೆಯ ಬದುಕು ಹಸನಾಗಿಸಲು ಹಳ್ಳಿಗಳೆಲ್ಲಾ ಕಳೆಳೆಯಾಗಿ ಆರ್ಥಿಕ ವಹಿವಾಟು ಹೆಚ್ಚಿಸಿಕೊಂಡು ಮುಂದೆಸಾಗಲು ಯಲ್ಲಾಪುರ ತಾಲೂಕಿನಲ್ಲಿ ಉದ್ಯಮಗಳು ತಲೆ ಎತ್ತಬೇಕಿದೆ ಇದರಿಂದ ಒಂದಷ್ಟು ಮಂದಿಗೆ ಕೆಲಸ ದೊರೆತು ಬದುಕು ಸುಗಮವಾಗಬೇಕಿದೆ.

ಈ ಭಾಗದಲ್ಲಿ ಗಾರ್ಮೆಂಟ್ಸ್ ಗಳು, ಆಹಾರ ಉತ್ಪಾದನ ಘಟಕಗಳು, ರಬ್ಬರ್ ಅವಲಂಬಿಸಿದ ಉದ್ಯಮ, ವಾಹನಗಳ ಬಿಡಿಭಾಗಗಳ ತಯಾರಿಕಾ ಘಟಕ, ಇತರೆ ಉತ್ಪಾಧನ ಘಟಕಗಳನ್ನು ಸ್ಥಾಪಿಸಬಹುದಾಗಿದೆ.

ಇತರೆ ಅಭಿವೃದ್ಧಿ ಕಾರ್ಯಗಳ ಪೈಕಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಶೀಘ್ರ ಅನುಷ್ಠಾನ. ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ. ಇತರೆ ಅಭಿವೃದ್ಧಿ ಪರ ಯೋಜನೆಗಳು ಸೃಷ್ಟಿಯಾಗಬೇಕಿದೆ.

ಇದೆಲ್ಲವನ್ನು ಯಲ್ಲಾಪುರ ತಾಲೂಕಿನಲ್ಲಿ ಅನುಷ್ಠಾನ ಮಾಡಲು ಸ್ಥಳವಕಾಶವಿಲ್ಲ ಇಲ್ಲಿ ಕೇವಲ ಅರಣ್ಯವಿದೆ ಎಂಬ ರೆಡಿಮೆಡ್ ಉತ್ತರ ನೀಡುವುದನ್ನು ಮೊದಲು ಬಿಟ್ಟುಬಿಡಿ ಅಭಿವೃದ್ಧಿಗೆ ಬೇಕಾಗುವ ಸ್ಥಳಗಳನ್ನು ಗುರುತಿಸಿ ಅಂತಹ ಜಾಗಗಳ ಮಾಹಿತಿ ತೆಗೆಯಿರಿ. ನೂರಾರು ಎಕರೆ ಜಾಗವನ್ನು ಬಳಕೆ ಮಾಡಿಕೊಂಡು ಅಭಿವೃದ್ಧಿ ಪಡಿಸುವತ್ತ ಮುಂದಾಗಿ.

ಪ್ರವಾಸೋದ್ಯಮದಲ್ಲಿ ವಿಫುಲವಾದ ಅವಕಾಶ
ಸ್ವಾಭಾವಿಕ ಪರಿಸರ. ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ. ಜಗತ್ತಿನ ಎಲ್ಲರ ಗಮನ ಸೆಳೆಯಬಲ್ಲ ಜಲಪಾತಗಳ ಆಗರ. ಘಟ್ಟ ಇಳಿದರೆ ಕಡಲತೀರ. 70 ಕಿ.ಮೀ ಅಂತರದಲ್ಲೆ ಇರುವ ವಿಮಾನ ನಿಲ್ದಾಣ ಇಷ್ಟೆಲ್ಲಾ ವ್ಯವಸ್ಥೆ ಇರುವ ಸುಂದರ ತಾಲೂಕು ನಮ್ಮ ಯಲ್ಲಾಪುರ ಆದರು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಇನ್ನು ತೊಟ್ಟಿಲಿನಲ್ಲಿರುವ ಹಸುಳೆ ಕನಿಷ್ಟಪಕ್ಷ ಅಂಬೆಗಾಲಿಡುವ ಮಟ್ಟಿಗಾದರು ಕೊಂಡೊಯ್ಯಬೇಕಿದೆ.



ನಯನಮನೋಹರವಾದ ಸಾತೋಡ್ಡಿ ಮತ್ತು ಮಾಗೋಡು ಇನ್ನಿತರ ಜಲಪಾತಗಳ ಪರಿಸರದಲ್ಲಿ;ಪರಿಸರಕ್ಕೆ ದಕ್ಕೆಯಾಗದಂತೆ ವಿವಿಧ ರೂಪದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಆಟಿಕೆಗಳ ಪಾಕ್೯ ನಿರ್ಮಾಣ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ತಂಗಲು ಉತ್ತಮ ಗುಣಮಟ್ಟದ ವಸತಿ ಸೌಕರ್ಯ. ಸುತ್ತಮುತ್ತಲಿನ ಸ್ಥಳಗಳ ವೀಕ್ಷಣೆಗೆ ನುರಿತ ಗೈಡ್ ಗಳ ತಂಡದೊಂದಿಗೆ ಸಕಲ ಸೌಕರ್ಯ. ಇವೆಲ್ಲವನ್ನು ನಿಭಾಯಿಸಬಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಖಾಸಗಿ ಕಂಪನಿಗಳ ಸಹಭಾಗಿತ್ವ. ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಆಧ್ಯತೆ. ಹೀಗೆ ಹಲವು ವಿಧದಲ್ಲಿ ಪ್ರವಾಸೋದ್ಯಮದ ಉನ್ನತೀಕರಣದೆಡೆಗೆ ಪ್ರಯತ್ನಿಸಬಹುದಾಗಿದೆ.



ಹತ್ತಿರದ ಗೋವರಾಜ್ಯ ನಮ್ಮ ಉತ್ತರ ಕನ್ನಡ ಜಿಲ್ಲೆಯ ಭೂಪ್ರದೇಶದಷ್ಟು ಇಲ್ಲದ್ದು ಆರ್ಥಿಕವಾಗಿ ಸಬಲವಾಗಿದೆ. ಅಲ್ಲಿರುವ ಒಂದೇ ಆಕರ್ಷಣೆ ಕೇವಲ ಕಡಲತೀರ ಅದು ಕರ್ನಾಟಕದಲ್ಲಿ ಸುಭೀಕ್ಷವಾಗಿದೆ ಆದರೆ ಅಲ್ಲಿ ಪ್ರವಾಸಿಗರಿಗೆ ಆಕರ್ಷಣೆಯ ಸಕಲ ಸೌಕರ್ಯಗಳನ್ನು ಒದಗಿಸಿ ಪ್ರವಾಸಿಗರ ಸ್ವರ್ಗವೆಂದೇ ಕರೆಸಿಕೊಳ್ಳುತ್ತಿದೆ. ಕಡಲ ತೀರ ಒಂದನ್ನು ಬಿಟ್ಟರೆ ಇನ್ನುಳಿದ ಎಲ್ಲವು ಕೃತಕ ನಿರ್ಮಾಣದ ವ್ಯವಸ್ಥೆ ಆದರು ಪ್ರವಾಸೋಧ್ಯಮದಿಂದಲೆ ರಾಜ್ಯದ ಆರ್ಥಿಕ ಮಟ್ಟ ಸುಧಾರಿಸುತ್ತಿದೆ ಎಂದರೆ ಆಶ್ಚರ್ಯ ಪಡಬೇಕಿದೆ.


ಅಂದಮೇಲೆ ಸ್ವಾಭಾವಿಕ ಪರಿಸರದ ಸ್ವರ್ಗವಾಗಿರುವ ನಮ್ಮ ಜಿಲ್ಲೆ ಪ್ರವಾಸೋದ್ಯಮದಲ್ಲಿ ಇನ್ನೆಷ್ಡು ಮುಂದುವರೆಯಬೇಕು ನೀವೆ ಯೋಚಿಸಿ.
ಇಷ್ಟೆಲ್ಲದರ ನಡುವೆ 2023 ರ ವಿಧಾನಸಭಾ ಚುನಾವಣೆ ನಡೆದು ಪಲಿತಾಂಶ ಪೆಟ್ಟಿಗೆಯಲ್ಲಿ ಭದ್ರವಾಗಿದೆ ನಾಳೆ ಪಲಿತಾಂಶ ಹೊರ ಬಿದ್ದು ಯಾವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂಬುವ ಕುತೂಹಲಕ್ಕೆ ತೆರೆಬೀಳಲಿದೆ. ಹಾಗಾಗಿ ರಾಜ್ಯದಲ್ಲಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಪ್ರಮುಖರಲ್ಲಿ ಜನರ ಪರವಾಗಿ ಪ್ರತಿಧ್ವನಿ ಯದೊಂದು ಕೋರಿಕೆ ದಯವಿಟ್ಟು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯಲ್ಲಾಪುರ ತಾಲೂಕಿಗೊಂದು ವಿಶೇಷ ಸ್ಥಾನ ನೀಡಿ ಅಭಿವೃದ್ಧಿ ಪ್ಯಾಕೇಜ್ ಒಂದನ್ನು ಘೋಷಿಸಬೇಕೆಂಬುದೆ ನಮ್ಮ ಪ್ರಾರ್ಥನೆ..
Prathidvani Yellapura