


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಚೌತಿ ಗಣಪನ ಹಬ್ಬಕ್ಕೆ ದಿನಗಣನೆ ಆರಂಭವಾಗುತತಿದ್ದಂತೆ ಗಜಮುಖನ ಆಹ್ವಾನಕ್ಕೆ ಸಕಲ ತಯಾರಿಗಳ ಸಿದ್ಧತೆ, ಅಲಂಕಾರಿಕ ಸಾಮಗ್ರಿಗಳು ಮಾರುಕಟ್ಟೆಗೆ ಬಂದಿದ್ದು ಯಲ್ಲಾಪುರದ ರವಿವಾರ ಸಂತೆಯಲ್ಲಿ ಗಣೇಶನನ್ನು ಕೂರಿಸುವ ರೆಡಿಮೇಡ್ ಮಂಟಪಗಳ ಮಾರಾಟ ಎಲ್ಲರ ಗಮನ ಸೆಳೆಯಿತು.

ಹಳಿಯಾಳ ಮೂಲದ ಪ್ರಶಾಂತ ಎಂಬಾತ ಧಾರವಾಡದಲ್ಲಿ ಪೂಜಾ ಮಂಟಪಗಳ ಬಾಡಿಗೆ ನೀಡುವ, ಮಾರಾಟ ಮಾಡುವವನಾಗಿದ್ದು ಕಳೆದ ಮೂರು ವರ್ಷಗಳಿಂದ ಪೂಜಾ ಕಾರ್ಯಗಳಿಗೆ ಬಟ್ಟೆಯಲ್ಲಿ ಸಿದ್ಧಪಡಿಸಿದ ಅಲಂಕಾರಿಕ ಮಂಟಪ ಮಾರುತ್ತಿದ್ದಾನೆ. ಇದೇ ಮೊದಲ ಬಾರಿಗೆ ಯಲ್ಲಾಪುರ ಮಾರುಕಟ್ಟೆಗೆ ಬಂದಿದ್ದು ಜನರಿಗೆ ಇದರ ವಿಶೇಷತೆ ಹೇಳುವುದರಲ್ಲೇ ದಿನಕಳೆದಂತಾಗಿದೆ. ಇನ್ನು ಮುಂದಷ್ಟೇ ಮಾರಾಟ ಶುರುವಾಗಬೇಕಿದೆ ಎನ್ನುತ್ತಾನೆ ಪ್ರಶಾಂತ.

ಹಿಂದೆಲ್ಲಾ ಚೌತಿ ಗಣಪನ ಸಂಭ್ರಮಕ್ಕೆ ಮನೆಗಳಲ್ಲಿ ಅಥವಾ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣಪತಿಯ ಮಂಟಪ ಮಕ್ಕಳು, ಯುವಕರು ಅತ್ಯುತ್ಸಾಹದಿಂದ ರಾತ್ರಿ ಎಲ್ಲಾ ನಿದ್ರೆ ಬಿಟ್ಟು ತಯಾರಿಸುತ್ತಿದ್ದರು. ಕಾಲ ಬದಲಾದಂತೆಲ್ಲಾ ಪದ್ಧತಿಗಳೂ ಬದಲಾಗುತ್ತಿದ್ದು ತಳಿರು-ತೋರಣಗಳು, ಫಲ-ಪುಷ್ಪಗಳು, ಬಾಳೆದಿಂಡಿನಿಂದ ತಯಾರಾಗುತ್ತಿದ್ದ ಮಂಟಪಗಳು ಮಾಯವಾಗಿ ರೆಡಿಮೇಡ್ ಮಂಟಪಗಳ ಕಾಲ ಬಂದಿದೆ.

Prathidvani Yellapura