
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಯಥೇಚ್ಛವಾಗಿ ದೊರೆಯುತ್ತಿದ್ದ ಬಾಯಲ್ಲಿ ನೀರೂರಿಸುವ ಅಪ್ಪೆ ಮಿಡಿ ಮಾವಿನಕಾಯಿಗೆ ಬರ ಬಂದಂತಾಗಿದ್ದು ಈ ವರ್ಷ ಮಾರುಕಟ್ಟೆಯಲ್ಲಿ ದೊರೆಯುವುದೇ ವಿರಳವಾಗಿದೆ.

ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ದಾಂಡೇಲಿಯ ಕೆಲ ಭಾಗಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಅಪ್ಪೆಮಿಡಿ ಹಾಗೂ ಜೀರಿಗೆ ಮಾವು ನೂರು ಮಿಡಿಗಳಿಗೆ ಇಂತಿಷ್ಟು ಎಂದು ಮಾರಾಟವಾಗುತ್ತಿತ್ತು. ಈ ವರ್ಷ ಮಾವಿನಮಿಡಿ ಸಂಖ್ಯೆ ಕಡಿಮೆಯಾಗಿದ್ದು ಕೆ.ಜಿ ಲೆಕ್ಕದಲ್ಲಿ ಅದೂ ಒಂದು ಕೆಜಿಗೆ ಗರಿಷ್ಠ ರೂ.450 ರಂತೆ ಮಾರಾಟವಾಗುತ್ತಿದೆ. ಆದಾಗ್ಯೂ ತನ್ನ ಮೌಲ್ಯ ಕಳೆದುಕೊಳ್ಳದೇ ಗ್ರಾಹಕರನ್ನು ಸೆಳೆಯುತ್ತಿದೆ. ಒಟ್ಟಿನಲ್ಲಿ ಊಟದ ಜೊತೆ ಉಪ್ಪಿನಕಾಯಿ ಇಲ್ಲದೇ ಊಟವೇ ಸೇರದ ಅನೇಕರಿಗೆ ಸಂಕಷ್ಟ ಬಂದಂತಾಗಿದೆ.

ವರ್ಷದಿಂದ ವರ್ಷಕ್ಕೆ ಮಾವಿನ ಫಸಲು ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅಪ್ಪೆಮಿಡಿ ಹಾಗೂ ಜೀರಿಗೆ ಮಿಡಿ ಉಪ್ಪಿನಕಾಯಿಗೆ ಯೋಗ್ಯವಾಗಿದ್ದು ಹೊಳೆಬದಿಯ ಹಳೆಯ ಮರಗಳಲ್ಲಿ ಸಿಗುವ ಮಿಡಿ ಮಾವು ರುಚಿಕರವಾಗಿರುತ್ತದೆ. ಆದರೆ ಮನುಷ್ಯನ ಆಸೆಗೆ ಕೇವಲ ಮಿಡಿಗಳನ್ನು ಕೀಳದೇ ರೆಂಬೆಗಳನ್ನೇ ಕತ್ತರಿಸುತ್ತಿರುವುದು ಮತ್ತು ಗಾಳಿ-ಮಳೆಗೆ ಮರಗಳೇ ಉರುಳುತ್ತಿರುವುದು ರುಚಿಕರವಾದ ಮಾವಿನ ಮಿಡಿಗೆ ಧಕ್ಕೆ ತಂದೊಡ್ಡಿದೆ. ಕಾರಣ ಮಾರುಕಟ್ಟೆಯಲ್ಲಿ ಮಾಲು ಕಡಿಮೆಯಾಗಿದ್ದು ಬೆಲೆಯೂ ಹೆಚ್ಚಾಗಿದೆ.- ಅಜ್ಜು, ಮಕ್ಬುಲ್, ರಶೀದ್ ಮಾವಿನ ಮಿಡಿ ವ್ಯಾಪಾರಿಗಳು.




Prathidvani Yellapura