Breaking News

ಕೈತೋಟ ಅಂದು ಇಂದು
( ಹಸಿರೇ ಉಸಿರು)

ಪ್ರತಿಧ್ವನಿ ಅತಿಥಿ ಬರಹದಲ್ಲಿ ಶ್ರೀ ಮಧುಕೇಶವ ಭಾಗ್ವತ ಯಲ್ಲಾಪುರ

ಮನೆಯಲ್ಲಿ ಸಂತೋಷ, ನೆಮ್ಮದಿ, ಆರೋಗ್ಯ ಸದಾ ನೆಲೆಸಿರಬೇಕೆಂದರೆ ಆ ಮನೆಯ ಮುಂದೊಂದು ಸಮೃದ್ಧಿ ಹೊಂದಿದ ಕೈತೋಟ ಇರಲೇಬೇಕು. ಅದು ಹೂವಿನ ಗಿಡಕ್ಕೆ ಮಾತ್ರ ಸೀಮಿತವಾಗದೇ ವಿವಿಧ ರೀತಿಯ ಸೊಪ್ಪು ತರಕಾರಿ ಬೆಳೆಯುವಂತಿದ್ದರೆ ಅಂತಹ ಮನೆಯಲ್ಲಿ ಆರೋಗ್ಯ, ಆನಂದ ಸದಾ ನೆಲೆಸಿರುತ್ತದೆ.

ಹಿಂದೆಲ್ಲ ಪ್ರತೀ ಮನೆಗೊಂದು ಕೈತೋಟ ಇದ್ದೇ ಇರುತ್ತಿತ್ತು. ಹಾಗೂ ಬಹುತೇಕ ಎಲ್ಲರ ಮನೆಯಲ್ಲ ಗೋಸಾಕಣೆ ಇರುವುದರಿಂದ ಗೊಬ್ಬರ ಸಿಗುವುದರಿಂದ ಕೈತೋಟದಲ್ಲಿ ಫಸಲು ಸಮೃದ್ಧವಾಗಿ ಬರುತ್ತಿತ್ತು. ಹೆಚ್ಚಾಗಿ ಬೆಳೆದ ತರಕಾರಿಗಳನ್ನು ಅಕ್ಕಪಕ್ಕದವರಿಗೆ, ಸಂಬಂಧಿಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳದೇ ಉಚಿತವಾಗಿ ಕೊಡುವ ಪದ್ದತಿ ಇತ್ತು. ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಮಣ್ಣಿನಲ್ಲಿ ತೇವಾಂಶ ಇತ್ತು. ಯಥೇಚ್ಛವಾಗಿ ಬೆಂಡೆ, ತೊಂಡೆ, ಬದನೆ, ಹಾಗಲ, ಮೂಲಂಗಿ, ಹರಿವೆ, ಬಸಲೆ, ಹೀರೆಕಾಯಿ, ಲಿಂಬು, ಮಾವು, ನುಗ್ಗೆಕಾಯಿ, ಅಮಟೆ, ಟೊಮ್ಯಾಟೊ, ಮೆಣಸು, ಈರುಳ್ಳಿ, ಶುಂಟಿ, ಅರಿಶಿನ, ಇತ್ಯಾದಿ ಬೆಳೆಗಳು ಹುಲುಸಾಗಿ ಬೆಳೆದು, ಗಿಡಗಳನ್ನೆಲ್ಲ ಹೂವಿನ ಬಳ್ಳಿಗಳು ಅಪ್ಪಿ ಪರಿಸರದಲ್ಲಿ ವಿವಿಧ ರೀತಿಯ ಹೂವಿನ ಘಮವು ಪಸರಿಸಿ ಮನೆಗೊಂದು ಶೋಭೆ ನೀಡುತ್ತಿದ್ದವು.


ಪೇಟೆಯಿಂದ ತರಕಾರಿ ಸೊಪ್ಪು ಕೊಂಡು ತರುವ ಯಾರೂ ಕಾಣುತ್ತಿರಲಿಲ್ಲ. ಯಾವುದೇ ಕಲಬೆರಕೆ ಇಲ್ಲದ ಶುಧ್ಧ ತರಕಾರಿಗಳು ಸಿಗುತ್ತಿದ್ದುದರಿಂದ ಅಂದಿನ (ಹಿಂದಿನ) ಜನರ ಆರೋಗ್ಯ ಚೆನ್ನಾಗಿದ್ದು ರೋಗ ರುಜಿನಗಳು ಕಡಿಮೆಯಾಗಿ ಬದುಕುವ ಆಯಸ್ಸಿನ ಮಿತಿ ಹೆಚ್ಚಿತ್ತು.

ಆದರೆ ಇಂದು….
ನಾವಿಬ್ಬರು ನಮಗಿಬ್ಬರು ಅನ್ನುವ ಉಕ್ತಿಯಂತೆ ಮನೆಯಲ್ಲಿ ಅವಿಭಕ್ತ ಕುಟುಂಬಗಳೆಲ್ಲ ಒಡೆದು ಹೋಗಿವೆ. ಹೆಚ್ಚಿನವರು ಪೇಟೆಯತ್ತ ಮುಖ ಮಾಡಿದ್ದಾರೆ. ಗಂಡ ಹೆಂಡತಿ ಇಬ್ಬರೂ ದುಡಿಯುವವರೂ ಹೆಚ್ಚಿರುವಾಗ ಅಡುಗೆ ಮಾಡಲೂ ಪುರುಸೊತ್ತು ಸಿಗದಿರುವಾಗ, ಅಂತಸ್ತಿನ ಮನೆಗಳು ಆಗಿರುವಾಗ ಕೈತೋಟ ಮಾಡುವುದು ಎಲ್ಲಿ ಮತ್ತು ಸಮಯ ಎಲ್ಲಿದೆ.
ಹೆಚ್ಚಿನ ಮನೆಗಳ ಮುಂದೆ ಕುಂಡದಲ್ಲಿ ಹೂವಿನ ಗಿಡ ಬೆಳೆಸುವುದಕ್ಕಷ್ಟೇ ಸೀಮಿತವಾಗಿದೆ. ಕೆಲವು ಕಡೆ ತರಕಾರಿ ಗಿಡಗಳನ್ನು ಕುಂಡದಲ್ಲಿ ಬೆಳೆಸುವುದು, ಮಾಳಿಗೆಯ ಮೇಲೆ ಮಣ್ಣು ಹರವಿ ಮಾಡುವುದನ್ನು ನೋಡಿದ್ದೇವೆ.


ತರಕಾರಿ ಗಿಡಗಳಿಗೆ ತೇವಾಂಶ ಇರುವ ಮಣ್ಣು ಬೇಕು ಮತ್ತು ಬೇರು ಹೂವಿನಗಿಡಕ್ಕಿಂತ ಆಳವಾಗಿ ಹೋಗುವುದರಿಂದ ನೇರವಾಗಿ ಮಣ್ಣಿನಲ್ಲೇ ಮಾಡಿದರೆ ಮಾತ್ರ ಸೊಗಸಾಗಿ ಬೆಳೆಯುತ್ತದೆ. ಈಗೀಗ ಬೇಗ ಬೆಳೆಯಲಿ, ಫಲ ಕೊಡಲಿ ಎಂದು ಬಳಸುವ ರಾಸಾಯನಿಕ ಗೊಬ್ಬರಗಳು ಆರೊಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಸುಳ್ಳಲ್ಲ.


ಪೇಟೆಯಲ್ಲಿ ಬರುವ ಬಹಳಷ್ಟು ತರಕಾರಿ ಮತ್ತು ಹಣ್ಣುಗಳು ಹೊರಗೊಂದು ಒಳಗೊಂದು ರೀತಿ ಇರುವುದು ನೋಡಿರುತ್ತೇವೆ. ರಾಸಾಯನಿಕ, ಆ್ಯಾಸಿಡ್, ಇಂಜೆಕ್ಷನ್ ಬಳಸಿ ಹೊರಗೆ ಬಣ್ಣ ಮತ್ತು ಬೇಕಾದ ದೊಡ್ಡ ಆಕಾರ ಬರುವಂತೆ ಮಾಡಿ ಮಾರುವುದರಿಂದ ಕೊಳ್ಳುವವರಿಗೆ ತೊಂದರೆ ತಪ್ಪಿದ್ದಲ್ಲ. ಸ್ವಚ್ಚ ಗಾಳಿ, ನೀರು, ಆಹಾರ, ಆರೋಗ್ಯಕ್ಕಾಗಿ ಈಗಲಾದರೂ ನಾವು ಬದಲಾಗಬೇಕಿದೆ.

ಚಂದದ ಮನೆಯ ಮುಂದೆ
ಅಂದದ ಕೈ ತೋಟವೊಂದಿರಲಿ
ಶುಧ್ಧ ತರಕಾರಿಯ ಬೆಳೆಯುತ್ತ
ನಿರ್ಮಲ ಗಾಳಿ ನೀರು ಸಿಗಲಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *