
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಹೊರವಲಯದಲ್ಲಿರುವ ಕೆ.ಮಿಲನ್ ಹೋಟೆಲ್ ಸಮೀಪ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಟ್ರಕ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ತಾಲೂಕಿನ ತಾಳಿಕುಂಬ್ರಿ ನಿವಾಸಿ ವಾಸುದೇವ ಬಾರ್ಕೆಲ್ಯಾ ಸಿದ್ದಿ(35) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿರುತ್ತಾನೆ. ರವಿವಾರ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರದ ಕಡೆಗೆ ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಮಹಾರಾಷ್ಟç ನೋಂದಣಿಯ ಟ್ರಕ್ ಚಲಾಯಿಸಿಕೊಂಡು ಬಂದ ಔರಾದ್ ತಾಲೂಕಿನ ಕೋಟಗ್ಯಾಳ ನಿವಾಸಿ ಜ್ಞಾನೇಶ್ವರ ಸಂಜೀವರಾವ್ ಡೊರಗಳ್ಳಿ(28) ಎಂಬಾತ ಇನ್ನೂ ನಂಬರ್ ಪ್ಲೇಟ್ ಹಾಕಿರದ ಹೀರೋ ಹೊಂಡಾ ಮೋಟಾರ್ ಸೈಕಲ್‌ನಲ್ಲಿ ಯಲ್ಲಾಪುರದಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಹಳಿಯಾಳ ತಾಲೂಕಿನ ವಾಡ ಗರಡೋಳಿ ನಿವಾಸಿ ಫ್ರಾನ್ಸಿಸ್ ಖೈತಾನ್ ಅಡಿವಪ್ಪಾಜೆ(35) ಮತ್ತು ಮೃತಪಟ್ಟ ವಾಸುದೇವ ಬಾರ್ಕೆಲ್ಯಾ ಸಿದ್ದಿ ಎಂಬುವರ ಬೈಕಿಗೆ ಎದುರಿನಿಂದ ಗುದ್ದಿದ ರಭಸಕ್ಕೆ ವಾಸುದೇವ ಬಾರ್ಕೆಲ್ಯಾ ಸಿದ್ದಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಇನ್ನೋರ್ವ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎರಡೂ ವಾಹನಗಳು ಜಖಂಗೊಂಡಿವೆ. ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


Prathidvani Yellapura