
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………..
ಪ್ರತಿಧ್ವನಿ,ಯಲ್ಲಾಪುರ : ವೃತ್ತಿ ದಿನಗಳಲ್ಲಿ ಎಂದು ನಿವೃತ್ತಿಯಾಗುತ್ತದೆಯೋ ಎಂದು ಭಾವಿಸುವ ಮನಸ್ಸುಗಳಿಗೆ ನನ್ನದೊಂದು ಸಲಹೆ, ನಿವೃತ್ತಿಯಾಗುವ ದಿನ ಬೆಳಕಾಗುವುದೇ ಬೇಡ ಎಂಬ ಭಾವ ಬರುವುದಂತೂ ಖಂಡಿತ. ಅದಕ್ಕೆ ನಾನೇ ತಾಜಾ ಉದಾಹರಣೆ. ಶಿಕ್ಷಕನಾಗಿ ವೃತ್ತಿ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡ ನನಗೆ ಯಲ್ಲಾಪುರ ತಾಲೂಕು ಅದರಲ್ಲೂ ಹಿಟ್ಟಿನಬೈಲು, ಚಿಕ್ಕಮಾವಳ್ಳಿ, ಮಾವಳ್ಳಿ ಕೊನೆಗೆ ನಿವೃತ್ತಿ ಹೊಂದುತ್ತಿರುವ ತಿಮ್ಮಾಪುರ ಗ್ರಾಮದಲ್ಲು ಸಹ ನನ್ನನ್ನು ಮನೆಯ ಮಗನಂತೆ ಕಂಡಿದ್ದಾರೆ.
ನನಗೂ ನನ್ನ ಕುಟುಂಬಕ್ಕೂ ಪ್ರೀತಿ ಅಕ್ಕರೆ ತೋರುವ ಮೂಲಕ ಕೇವಲ ಶಿಕ್ಷಕನೆಂದು ಭಾವಿಸದೇ ಕುಟುಂಬದ ಸದಸ್ಯನಾಗಿ ಅಕ್ಕರೆ ತೋರಿದ್ದಾರೆ.. ವೃತ್ತಿಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ನೀಡಿ ಸೇವೆ ಸಲ್ಲಿಸಲು ಸಹಕಾರ ನೀಡಿದ್ದು ಮರೆಯಲು ಸಾಧ್ಯವಿಲ್ಲ ಎಂದು ಶಿಕ್ಷಕ ವಿಜಯ್ ಕುಮಾರ್ ಎಸ್ ನಾಯಕ ಹೇಳಿದರು.

ಅವರು ಶಿಕ್ಷಕ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದ್ದು ತಿಮ್ಮಾಪುರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವೃತ್ತಿಯಲ್ಲಿ ಶಿಕ್ಷಕನಾದರೂ ಯುವಕರೊಂದಿಗೆ ಯುವಕನಾಗಿ, ಮಕ್ಕಳೊಂದಿಗೆ ಮಗುವಾಗಿ, ಪೋಷಕರ ಒಡನಾಟದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡು ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿಒರುವ ವಿಜಯ್ ಎಸ್ ನಾಯಕರ ಕುರಿತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಆರ್ ಭಟ್ಟ, ಗ್ರಾ.ಪಂ ಅಧ್ಯಕ್ಷ ವಿಶ್ವೇಶ್ವರ ಹೆಗಡೆ, ಸದಸ್ಯ ವಾಸು ಮಾಪ್ಸೇಕರ್, ಮಾಜಿ ವಿದ್ಯಾರ್ಥಿ ಹಾಗೂ ಪಂಚಾಯತ ಮಾಜಿ ಅಧ್ಯಕ್ಷ ಮಹೇಶ್ ಕಾಸರಕರ, ಹಿಟ್ಟಿನಬೈಲು ಹಿರಿಯ ನಾಗರೀಕ ಶ್ರೀಪತಿ ಭಟ್ಟ, ಸ್ಥಳೀಯ ಪ್ರಮುಖ ಶ್ರೀಪಾದ ಮೆಣಸುಮನೆ, ಅಲಗೇರಿಯ ಸಾಮಾಜಿಕ ಕಾರ್ಯಕರ್ತ ಸುರೇಶ್ ನಾಯಕ, ಲಕ್ಷ್ಮಣ ನಾಯಕ, ತಿಮ್ಮಾಪುರ ಶಾಲಾ ಹಳೆಯ ವಿದ್ಯಾರ್ಥಿನಿ ಧನ್ಯಾ ಹೆಗಡೆ, ಕಾವ್ಯಾ ಮಾತನಾಡಿದರು.

ವೇದಿಕೆಯಲ್ಲಿ ಕಣ್ಣೀಗೇರಿ ಕ್ಲಸ್ಟರ್ ಸಿಆರ್‌ಪಿ ಶ್ರೀನಿವಾಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಗುಮ್ಮಾನಿ, ನಿವೃತ್ತಿ ನಂತರವೂ ವಿಜಯ್ ಎಸ್ ನಾಯಕವರ ಸೇವೆ ಶಾಲೆಗೆ ಅವಶ್ಯವಿದ್ದು ಇಲಾಖೆ ಸಹಕರಿಸಿ ಯಾವುದಾದರೂ ರೂಪದಲ್ಲಿ ಅವಕಾಶ ನೀಡಬೇಕೆಂದು ಹೇಳಿದರು.

ವೇದಿಕೆಯಲ್ಲಿ ವಿಜಯ್ ಎಸ್ ನಾಯಕ ಮತ್ತು ಅವರ ಪತ್ನಿ ವಿಜಯಶ್ರೀ ನಾಯಕ ಅವರನ್ನು ಎಸ್.ಡಿ.ಎಂ.ಸಿ, ಊರ ನಾಗರೀಕರು, ಹಳೆಯ ವಿದ್ಯಾರ್ಥಿಗಳು, ಶಾಲಾ ಸಹೋದ್ಯೋಗಿಗಳು, ಹಿಟ್ಟಿನ ಬೈಲು , ಮಾವಳ್ಳಿ, ಚಿಕ್ಕಮಾವಳ್ಳಿ ಗ್ರಾಮಸ್ಥರು ಗೌರವಿಸಿ ಸನ್ಮಾನಿಸಿದರು.
ಶಾಲೆಯ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಶಿಕ್ಷಕ ಶ್ರೀಕಾಂತ ವೈದ್ಯ ಸ್ವಾಗತಿಸಿದರು. ಸ್ನೇಹಿತ, ಶಿಕ್ಷಕ ಹರೀಶ್ ನಾಯಕ ಪ್ರಾಸ್ತಾವಿಕ ನುಡಿದರು.
ಇದೇ ಸಂದರ್ಭದಲ್ಲಿ ೫ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯನ್ನೂ ನೀಡಲಾಯಿತು.
