
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ – ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ನನ್ನ ಶಾಸಕ ಸ್ಥಾನ ಈ ಕ್ಷೇತ್ರದಲ್ಲಿ ಪ್ರಾರಂಭವಾದಾಗಿನಿಂದ ಪ್ರಾರಂಭಿಸಿದ್ದು ಇಂದಿಗು ಕ್ಷೇತ್ರದ ತುಂಬಾ ಜನರ ಆತ್ಮೀಯತೆಯ ಮಾತುಗಳು ಮುಂದಿನ ಸೇವಾ ಕಾರ್ಯಕ್ಕೆ ಪ್ರೇರಣೆಯಾಗಿದೆ. ಜನರು ದಬ್ಬಾಳಿಕೆಯ ರಾಜಕಾರಾಣ ಅಂತ್ಯ ಹಾಡಿ ಸೌಮ್ಯ ರಾಜಕಾರಣವನ್ನು ಆಯ್ಕೆಮಾಡಲಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಬದಲಾವಣೆ ತರಲಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಹೇಳಿದರು.

ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಜನರ ಜೀವನ ಮಟ್ಟ ಅತ್ಯಂತ ಕಷ್ಟಕರವಾಗಿದ್ದು ಆರ್ಥಿಕತೆ ಸಾಕಷ್ಟು ಹಿನ್ಬಡೆಯಲಿದೆ. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿನ ಅಗತ್ಯವಸ್ತುಗಳ ಬೆಲೆಗು ಈಗಿನ ಬಿಜೆಪಿ ಸರ್ಕಾರದ ಅವಧಿಯ ಬೆಲೆಗು ಹೋಲಿಕೆ ಮಾಡಿದರೆ ಸಾಕು ಜನಪರ ಸರ್ಕಾರ ಯಾವುದೆಂದು ತಿಳಿಯುತ್ತದೆ. ಜನಬೇಸತ್ತಿದ್ದು ಬದಲಾವಣೆ ಬಯಸಿದ್ದಾರೆ ಅದಕ್ಕಾಗಿ ಜನರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲಿದ್ದಾರೆ. ದೇಶವನ್ನು ಎಪ್ಪತ್ತು ವರ್ಷಗಳಿಂದ ಕಟ್ಟಿ ಬೆಳೆಸಿಕೊಂಡು ಬಂದಿರುವುದು ಕಾಂಗ್ರೆಸ್ ಪಕ್ಷವೆ ಆದರು ಬಿಜೆಪಿ ಯವರಿಗೆ ಹೇಳಿಕೊಳ್ಳಲು ವಿಷಯವಿಲ್ಲದೆ ಕಾಂಗ್ರೆಸ್ ಬಗ್ಗೆ ಜನರಿಗೆ ಸುಳ್ಳು ಸುದ್ದಿ ಹೇಳಿ ಮಂಕುಬೂದಿ ಎರಚುತ್ತಿದ್ದು ಜನರಿಗೆ ಸತ್ಯದ ಅರಿವಿದೆ ಎಂದು ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಹೇಳಿದರು.

ಇದಕ್ಕು ಮುನ್ನ ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆವರಣದಿಂದ ರ‍್ಯಾಲಿ ಮೂಲಕ ನೂರಾರು ಸಂಖ್ಯೆಯ ಅಭಿಮಾನಿಗಳು ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಚುನಾವಣಾ ವೀಕ್ಷಕ ಮರಿಯೋಜಿರಾವ್, ಪ್ರಮುಖರಾದ ಶ್ರೀನಿವಾಸ ಭಟ್ ಧಾತ್ರಿ, ವಿ.ಎಸ್.ಭಟ್, ಉಲ್ಲಾಸ್ ಶಾನಬಾಗ್, ಎನ್.ಕೆ.ಭಟ್, ರಾಘು ಭಟ್ , ರವಿಚಂದ್ರ ನಾಯ್ಕ್ ಇಂಜಿನಿಯರ್, ಎಸ್.ಎ.ಬ್ಯಾರಿ, ಅನಿಲ್ ಮರಾಠೆ , ಎಂಡಿ.ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.
Prathidvani Yellapura