
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಒಟ್ಟು 58 ಕೊಳವೆಬಾವಿಗಳು ಕಾರ್ಯ ನಿರ್ವಹಿಸುತ್ತಿದ್ದು ಪಟ್ಟಣದ ಎಲ್ಲಾ ವಾರ್ಡುಗಳ ಬಹುತೇಕ ನೀರಿನ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲಾಗಿದೆ. ಮುಂಜಾಗ್ರತೆಗಾಗಿ ಮೂರು ನೂತನ ಕೊಳವೆಬಾವಿಗಳನ್ನು ನಿರ್ಮಿಸಲಿದ್ದೇವೆ . ಈವರೆಗೆ ಯಾವುದೇ ವಾರ್ಡ್ ನಾಗರೀಕರಾಗಲೀ ಅಥವಾ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿದ್ದ ಪ.ಪಂ ಸದಸ್ಯರಾಗಲೀ ನೀರಿನ ಕೊರತೆಯಾದ ಕುರಿತಾಗಿ ನನಗಾಗಲೀ, ಪ.ಪಂ ಅಧಿಕಾರಿಗಳಿಗಾಗಲೀ ದೂರು ನೀಡಿರುವುದಿಲ್ಲ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಯಲ್ಲಾಪುರ ಕಾಂಗ್ರೆಸ್ ನಗರ ಘಟಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದರು ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯತ ವಿಫಲವಾಗಿದೆ. ಪಟ್ಟಣ ಪಂಚಾಯತ ಸದಸ್ಯರು ಕೇವಲ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ನಗರ ಕಾಂಗ್ರೆಸ್ ಸಮಿತಿಯ ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದುಟ್ಟಿದು ಕೇವಲ ರಾಜಕೀಯ ದುರುದ್ದೇಶಗಳಿಂದ ಕೂಡಿದ್ದಾಗಿದೆ ಎಂದರು.
ದೇವೀ ಮೈದಾನದಲ್ಲಿ ನೂತನವಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದು ಅದರ ಔಚಿತ್ಯವೇನೆಂದು ನಿನ್ನೆ ಶುದ್ಧಿಗೋಷ್ಠಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಪ.ಪಂ ಅಧ್ಯಕ್ಷೆ ಹಿಂದೆ ಇದ್ದ ಶೌಚಾಲಯ ಅತ್ಯಂತ ಇಕ್ಕಟ್ಟಿನಿಂದ ಕೂಡಿತ್ತು. ಅಲ್ಲದೇ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಇರಲಿಲ್ಲವಾದ ಕಾರಣ ಇದೀಗ ನಿರ್ಮಿಸಲಾಗಿದೆ ಎಂದರು.
ಪಟ್ಟಣದಲ್ಲಿ ಜಾತ್ರೆಯ ಅವಧಿಯಲ್ಲಿ ಅಳವಡಿಸಲು ಆರಂಭಿಸಿದ್ದ ಬೀದಿ ದೀಪಗಳ ವ್ಯವಸ್ಥೆ ಕುಂಠುತ್ತಾ ಸಾಗಿದೆ ಎಂದು ಆರೋಪಿಸಲಾಗಿತ್ತು. ತಾಂತ್ರಿಕ ಕಾರಣಗಳಿಗಾಗಿ ಕಾಮಗಾರಿ ವಿಳಂಬವಾಗಿರುವುದು ನಿಜವಾದರೂ ಯೋಜನೆ ಪ್ರಗತಿಯಲ್ಲಿದೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಮಾತನಾಡಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆಗಾಗಿ ರೂಪಿಸಲಾದ ಯಾವುದೇ ಹೊಸ ಬೆಳವಣಿಗೆಯು ನಡೆದಿಲ್ಲ. ಅದು ನಮ್ಮ ಗಮನಕ್ಕೂ ಬಂದಿಲ್ಲ. ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಪ.ಪಂ ಮಾಜಿ ಸದಸ್ಯ ರವಿಚಂದ್ರ ನಾಯ್ಕ ಅವರ ಅಧಿಕಾರವಧಿಯಲ್ಲಿ ಪಟ್ಟಣದಲ್ಲಿ ನೀರಿನ ಕೊರತೆಗಾಗಿ ಖಾಲಿ ಕೊಡ ಪ್ರದರ್ಶನ ನಡೆದಿತ್ತೆಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದವರು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು. ಈ ಬಾರಿಯ ದೇವಿ ಜಾತ್ರೆಯು ಅತ್ಯಂತ ವಿಜೃಂಬಣೆಯಿಂದ ಯಶಸ್ವಿಯಾಗಿ ನಡೆದಿದೆ ಎಂಬುದು ಪಟ್ಟಣ ಪಂಚಾಯತ ಆಡಳಿತಕ್ಕೆ ಹೆಮ್ಮೆಯ ಸಂಗತಿ ಎಂದರು.

ಜೋಡುಕೆರೆ ಸಮೀಪ ಸ್ವಾಗತ ಕಮಾನು ನಿರ್ಮಿಸಿದ್ದು ಸಾರ್ವಜನಿಕ ಆಸ್ಪತ್ರೆ, ಯಲ್ಲಾಪುರ ಎಂದು ಬರೆಸಲಾಗಿದ್ದು ಮಂಜುನಾಥ ನಗರ ಮತ್ತು ಹೆಬ್ಬಾರ್ ನಗರ ಎಂದು ತೋರಿಸಲಾಗಿದೆ. ಇದರಲ್ಲಿ ಸಚಿವ ಶಿವರಾಮ ಹೆಬ್ಬಾರ್ ಎಂದು ಎಲ್ಲಿಯೂ ಬರೆಸಿಲ್ಲ. ಹಾಗೂ ಇದರ ನಿರ್ಮಾಣಕ್ಕೆ 4.5 ಲಕ್ಷ ರು ವೆಚ್ಚವಾಗಿದೆಯೆ ಹೊರತು ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ 15 ಲಕ್ಷ ಎಂದು ಹೇಳಿರುವುದು ಎಷ್ಟು ಸಮಂಜಸ? ಜನರ ದಿಕ್ಕು ತಪ್ಪಿಸುವ ಸಲುವಾಗಿ ಮತ್ತು ಚುನಾವಣೆಯ ಗಿಮಿಕ್‌ಗಾಗಿ ಕಾಂಗ್ರೆಸ್ ಮಾಡಿರುವ ವೃಥಾ ಆರೋಪ ಎಂದು ಮಂಜುನಾಥ ನಗರ ವಾರ್ಡ್ ಪ.ಪಂ ಸದಸ್ಯ ಸತೀಶ್ ನಾಯ್ಕ ಹೇಳಿದರು.

ಗಣಪತಿಗಲ್ಲಿಯಲ್ಲಿ ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಮಿಶ್ರಣಗೊಂಡು ಅಶುದ್ಧ ನೀರು ಸರಬರಾಜಾಗುತ್ತಿದೆ ಎಂಬ ವಿಚಾರ ತಿಳಿಯುತ್ತಲೇ ಈ ಕುರಿತು ಗಮನ ಹರಿಸಿ ಸಮಸ್ಯೆ ಬಗೆಹರಿಸಲಾಗಿದೆ. ಹೊಸದಾಗಿ ಕೊಳವೆಬಾವಿ ತೆಗೆಸಿರುವುದರಲ್ಲಿ ಮೊದಮೊದಲು ಮಣ್ಣು ಮಿಶ್ರಿತ ಕಲುಷಿತ ನೀರೇ ಬರುವುದು ನಂತರದಲ್ಲಿ ಶುದ್ಧ ನೀರು ಸರಬರಾಜಾಗುತ್ತಿದೆ. ಕಾಲಕಾಲಕ್ಕೆ ಸಮಸ್ಯೆಗಳನ್ನು ತಿಳಿಯಲು ವಾರ್ಡ್ ಜನರೊಂದಿಗೆ ಸದಾ ಸಂಪರ್ಕದಲ್ಲಿರುತ್ತೇನೆ, ಅಂದ ಮೇಲೆ ವಾರ್ಡ್ ಸದಸ್ಯನೇ ಗೊತ್ತಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಹೇಳಿಕೆ ಬಾಲಿಷವಾಗಿದೆ ಎಂದು ಗಣಪತಿಗಲ್ಲಿ ವಾರ್ಡ್ ಸದಸ್ಯ ಪ್ರಶಾಂತ ತಳವಾರ ಹೇಳಿದರು.
Prathidvani Yellapura