
ಪ್ರತಿಧ್ವನಿ,ಯಲ್ಲಾಪುರ : ಸಾಹಿತ್ಯ ಮತ್ತು ಕಲೆ ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಶ್ರದ್ಧೆ ಮತ್ತು ಶ್ರಮ ಸಂಸ್ಕೃತಿ ಅತಿ ಮುಖ್ಯವಾಗಿದೆ. ಯಾವುದೇ ಸಾಧನೆಯ ಹಿಂದೆ ಧೀರ್ಘಕಾಲದ ತಪಸ್ಸು, ಮಾಡಿಯೇ ತೀರುತ್ತೇನೆಂಬ ಛಲ ಸಾಧಕನನ್ನಾಗಿಸುತ್ತದೆ. ಪ್ರತಿಯೊಬ್ಬರಲ್ಲೂ ದೇವರ ವರವೆಂಬAತೆ ಏನಾದರೊಂದು ಸಾಧಿಸುವ ಶ್ರೇಷ್ಠ ಗುಣ ಇದ್ದೇ ಇರುತ್ತದೆ. ಅದನ್ನು ಜಾಗೃತಗೊಳಿಸಿ ಸಮಾಜಕ್ಕೆ ಸೇವೆಯ ರೂಪದಲ್ಲಿ ತನಗೆ ಶ್ರಮದ ರೂಪದಲ್ಲಿ ಸಾಧಿಸಿ ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ಖ್ಯಾತ ಕೆತ್ತನೆ ಶಿಲ್ಪಿ ಸಂತೋಷ ಗುಡಿಗಾರ ಹೇಳಿದರು.
ಅವರು ಪಟ್ಟಣದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ “ತಿಂಗಳ ಕವನ” ಸಂಚಿಕೆಯ ಎರಡನೇ ಆವೃತ್ತಿ , ಕಾರ್ಮಿಕ ದಿನಾಚರಣೆಯೊಂದಿಗೆ ಆಚರಿಸಿದ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಶ್ರಮವೇ ಜೀವನ ಎಂಬ ವಿಷಯದ ಮೇಲೆ ಮಾತನಾಡಿದ ಪತ್ರಕರ್ತ ಕೇಬಲ್ ನಾಗೇಶ್, ಶ್ರಮವೇ ಜೀವನ ಉಪನ್ಯಾಸದ ವಸ್ತು ಎಂಬುದಕ್ಕಿಂತ ಬದುಕಿನ ಸತ್ಯವೇ ಆಗಿದೆ. ಶ್ರಮವಿಲ್ಲದ ಬದುಕು ನಿರರ್ಥಕ. ಹಣ, ಅಂತಸ್ತು , ಗೌರವ, ಅಧಿಕಾರ ಏನೇ ಇದ್ದರೂ ಶ್ರಮಿಸಿ ಬದುಕುವುದರಲ್ಲಿರುವ ಸುಖ ಆಲಸ್ಯದಿಂದಿದ್ದರೆ ಸಿಗಲಾರದು.”ಲೇಬರ್ ಡೇ ಇದ್ದಂತೆ ನೈಬರ್ ಡೇ” ಇರಬೇಕಿರುವುದು ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆ . ಅಂದಿನ ಡಾ.ರಾಜ್‌ಕುಮಾರ್ ಚಿತ್ರದ ಗೀತೆಯೊಂದರ ಸಾಲಿನಂತೆ ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ ಕನ್ನಂಬಾಡಿಯ ಕಟ್ಟದಿದ್ದರೆ ಎಂಬ ಪದಗಳಲ್ಲೇ ಶ್ರಮಕ್ಕಿರುವ ಮಹತ್ವ ಎಂತಹುದು ಎಂದು ತೋರುತ್ತದೆ. ಒಟ್ಟಿನಲ್ಲಿ ಕೃಷಿಕ, ಸೈನಿಕ, ಕಾರ್ಮಿಕ, ಮತ್ತು ಶಿಕ್ಷಕ ಇವರೆಲ್ಲರ ಶ್ರಮಕ್ಕೆ ವಂದಿಸಬೇಕಿದೆ ಎಂದರು.

ಪ್ರತಿಯೊಬ್ಬರೂ ಕಾರ್ಮಿಕರಾಗಿ ತಮ್ಮ ಬದುಕನ್ನು ಸಾಗಿಸುವುದು ನೈಜ ಸತ್ಯವಾಗಿದೆ. ಶ್ರಮ ಸಂಸ್ಕೃತಿ ಎಂಬುದು ನಮ್ಮ ಜೀವನ ಪದ್ದತಿಯಲ್ಲೇ ಅಡಕವಾಗಿದೆ. ಇಂತಹ ಕಾರ್ಮಿಕರಿಗೊಂದು ಗೌರವ ಸಲ್ಲಿಸುವ ದಿನವಿರುವುದು ಶ್ರೇಷ್ಠ. ಅದರ ಹೆಸರಿನಲ್ಲಿ ಕಾರ್ಮಿಕರಿಗೆ ಗೌರವಿಸಿ ತಿಂಗಳ ಕವನದ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶ್ರಮಕ್ಕೆ ಶ್ಲಾಘಿಸುತ್ತೇನೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಂಶುಪಾಲ, ಹಿರಿಯ ಬರಹಗಾರ ಶ್ರೀರಂಗ ಕಟ್ಟಿ ಹೇಳಿದರು.

ಈ ಸಂದರ್ಭದಲ್ಲಿ 40 ವರ್ಷಗಳಿಂದ ಅಡಿಕೆ ಕೊನೆ ಕೊಯ್ಯುವ ರಮೇಶ ನಾಯ್ಕ, ಉತ್ತಮ ಹೊಲಿಗೆ ಹೊಲಿಯುವ ಸುನಿತಾ ನಾಗರಾಜ ಭಟ್ಟ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅ.ಭಾ.ಸಾ.ಪದ ಅಧ್ಯಕ್ಷ ಗಣಪತಿ ಕಂಚೀಪಾಲ ಸ್ವಾಗತಿಸಿದರು. ಮುಕ್ತಾ ಶಂಕರ ವಂದಿಸಿದರು. ಪುಷ್ಪಾ ಮಾಳಕೊಪ್ಪ ನಿರೂಪಿಸಿದರು.

ಕಾರ್ಯಕ್ರಮದಲ್ಲಿ 10 ಕ್ಕೂ ಅಧಿಕ ಕವಿಗಳು ಸ್ವರಚಿತ ಕವನ ವಾಚಿಸಿದರು.
Prathidvani Yellapura