
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಅಕ್ಬರ್‌ಗಲ್ಲಿ ಮತ್ತು ಇಸ್ಲಾಂಗಲ್ಲಿ ಸಂಪರ್ಕಿಸುವ ರಸ್ತೆಯಲ್ಲಿ ಒಣಗಿದ ತೆಂಗಿನಮರ ಬಿದ್ದು ತಂದೆ ಸ್ಥಳದಲ್ಲೇ ಪ್ರಾಣ ಬಿಟ್ಟ ಒಂದನೆ ತರಗತಿ ಓದುವ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಳು. ಇಂತಹ ಕರುಳು ಹಿಂಡುವ ಸಾವು ಕಂಡರೂ ಅನೇಕ ಮಂದಿ ತಮ್ಮ ಮನೆಯ ಆವರಣದಲ್ಲಿ ಅಪಾಯಕರ ರೀತಿಯಲ್ಲಿ ಒಣಗಿ ನಿಂತಿರುವ ಗರಿ ಇಲ್ಲದ ತೆಂಗಿನ ಬೋಳು ಮರಗಳನ್ನು ತೆಗೆಸದೇ ನಿರ್ಲಕ್ಷ ತೋರುತ್ತಿರುವುದು ವಿಷಾಧನೀಯವಾಗಿದೆ.

ಪಟ್ಟಣ ಪಂಚಾಯತಿ ಪೌರಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದ ಡೇವಿಡ್ ದಾನೆಲ್ ಮಾದರ್ (೩೬) ಎಂಬಾತ ತನ್ನ ಮಗಳನ್ನು ಶಾಲೆಯಿಂದ ಮನೆಗೆ ಕರೆತರುವ ವೇಳೆ ದುರ್ವಿಧಿಯ ರೂಪದಲ್ಲಿ ಒಣಗಿ ನಿಂತಿದ್ದ ತೆಂಗಿನ ಮರ ಕ್ಷಣದಲ್ಲಿ ಬಿದ್ದ ಪರಿಣಾಮ ಮೃತಪಟ್ಟಿರುತ್ತಾನೆ. ಆ ಕುಟುಂಬ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಮರ ಬಿದ್ದುದು ಆಕಸ್ಮಿಕವೇ ಆದರೂ ಮರದ ಮಾಲೀಕರ ನಿಷ್ಕಾಳಜಿಯನ್ನು ಅಲ್ಲಗೆಳೆಯುವಂತಿಲ್ಲ.

ಬಹುಕಾಲದಿಂದ ಒಣಗಿ ನಿಂತಿದ್ದ ಮರ ತೆಗೆಸದೇ ರಸ್ತೆಯಲ್ಲಿ ಸಂಚರಿಸುವ ನಾಗರಿಕರಿಗೆ ಅಥವಾ ತನ್ನ ಮನೆಯ ಮೇಲೇ ಬಿದ್ದು ಪ್ರಾಣಹಾನಿ ಯಾಗಬಹುದೆಂದು ತಿಳಿದರೂ ತೆಗೆಸದಿರುವುದು ಅಕ್ಷಮ್ಯ ಅಪರಾಧ.

ಸಾವು ಸಂಭವಿಸಿದಾಗ ಅಯ್ಯೋ ಎನ್ನುವವರ ಸ್ವರದ ಹಿಂದೆ ನಿಷ್ಕಾಳಜಿಯ ಪ್ರಶ್ನೆಯೂ ಎದ್ದಿರುತ್ತದೆ. ಆದರೆ ಪರಿಹಾರವೆಂಬ ಪದ ಬಂದಾಗ ಅವೆಲ್ಲವೂ ಗೌಣವಾಗಿ ಸಮಸ್ಯೆ ಸರಿದು ಹೋಗುತ್ತದೆ. ಆದರೆ ಪ್ರಜ್ಞಾವಂತ ಸಮಾಜ ಸಂಭವಿಸಿದ ಘಟನೆಯನ್ನಾಧಿರಿಸಿ ಎಚ್ಚೆತ್ತುಕೊಂಡು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುವುದು ಸೂಕ್ತವಾಗಿದೆ.
ಒಂದು ಅರ್ಥದಲ್ಲಿ ಪಟ್ಟಣದಾದ್ಯಂತ ಬೀಳುವ ಸ್ಥಿತಿಯಲ್ಲಿರುವ ಯಾವುದೇ ಮರಗಳು, ವಿದ್ಯುತ್ ಕಂಬಗಳು , ಶಿಥಿಲವಾದ ಕಟ್ಟಡಗಳು, ನೀರಿನ ಟ್ಯಾಂಕುಗಳನ್ನು ಗುರುತಿಸಿ ಅದರ ಮಾಲೀಕರಿಗೆ ಅಥವಾ ಸಂಬಂಧಿಸಿದ ಇಲಾಖೆಗೆ ಎಚ್ಛರಿಕೆ ನೀಡಿ ತೆರವುಗೊಳಿಸಬೇಕಿದೆ. ಇಲ್ಲವಾದಲ್ಲಿ ಒಂದಾನುವೇಳೆ ಅಂತಹ ಮರ, ಕಟ್ಟಡದ ಮಾಲಿಕರು ಮರ ಅಥವ ಕಟ್ಟಡ ತೆಗೆಸದೆ ಅದರಿಂದ ಜೀವ ಹಾನಿ ಸಂಭವಿಸಿದಲ್ಲಿ ಪ್ರಾಣಹಾನಿಗೆ ಮಾಲಿಕನೆ ಕಾರಣೀಕರ್ತರೆಂದು. ಮತ್ತು ಅದನ್ನು ಆಕಸ್ಮಿಕ ಸಾವು ಎನ್ನದೆ ಕೊಲೆ ಎಂಬುದಾಗಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಈ ಕುರಿತು ಸ್ಥಳೀಯ ಆಡಳಿತ , ಪೊಲೀಸ್ ಇಲಾಖೆ ಗಮನ ಹರಿಸಿ ಸಮಸ್ಯೆ ಇರುವ ಕಡೆ ಬಗೆಹರಿಸುವತ್ತ ಗಂಭೀರವಾಗಿ ಚಿಂತಿಸಬೇಕಿದ್ದು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವುದಲ್ಲದೇ ಪ್ರಾಣಿಗಳಿಗಿಂತ ಬುದ್ಧಿವಂತ ಮನುಜರು ನಾವು ಎಂಬುದನ್ನು ಸಾಬೀತುಪಡಿಸಬೇಕಿದೆ.
ದಷ್ಟಪುಷ್ಟವಾಗಿದ್ದು ದುಡಿದು ಕುಟುಂಬ ನಿರ್ವಹಿಸುತ್ತಿದ್ದವನ ಮೇಲೆ ಒಣಗಿ ಬೋಳಾಗಿದ್ದ ತೆಂಗಿನ ಮರ ಬಿದ್ದಾಗ ಮಗಳ ಪ್ರಾಣ ಕಾಪಾಡಿ ತಾನು ಸಾವನ್ನು ಕಂಡಿದ್ದು ಇದೀಗ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಇಂತಹ ಹೃದಯ ವಿಧ್ರಾವಕ ಸಾವನ್ನೂ ಕಂಡೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ತೋರಿದರೆ ಪ್ರಜ್ಞಾವಂತ ಸಮಾಜ ತಲೆತಗ್ಗಿಸಿದಂತಾಗುತ್ತದೆ.


